ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೊ ಇಂಡಿಯಾ 15ನೇ ಆವೃತ್ತಿಯ ನಾಲ್ಕನೇ ದಿನವಾದ ಗುರುವಾರ ಸಂಸದ ತೇಜಸ್ವಿ ಸೂರ್ಯ ಅವರು ಎಚ್‌ಟಿಟಿ40 ತರಬೇತಿ ವಿಮಾನದಲ್ಲಿ ಹಾರಾಟ ನಡೆಸಿದರು
ಪಿಟಿಐ ಚಿತ್ರ
ಬೆಂಗಳೂರು: ಎಚ್‌ಎಎಲ್ ಅಭಿವೃದ್ಧಿಪಡಿಸಿರುವ ಹಿಂದೂಸ್ತಾನ್ ಟರ್ಬೊ ಟ್ರೈನರ್ 40 (ಎಚ್‌ಟಿಟಿ) ತರಬೇತಿ ಯುದ್ಧ ವಿಮಾನದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಹಾರಾಟ ನಡೆಸಿದರು.
ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೊ ಇಂಡಿಯಾ 15ನೇ ಆವೃತ್ತಿಯ ನಾಲ್ಕನೇ ದಿನವಾದ ಗುರುವಾರ ಭೇಟಿ ನೀಡಿದ ತೇಜಸ್ವಿಸೂರ್ಯ ಅವರು ಪೈಲಟ್ ಪೋಷಾಕಿನಲ್ಲಿದ್ದರು. ಅವರನ್ನು ಬರಮಾಡಿಕೊಂಡ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಎಚ್‌ಟಿಟಿ–40 ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್ ಆಸನದಲ್ಲಿ ಕೂರಿಸಿದರು.
ತರಬೇತಿ ವಿಮಾನದಲ್ಲಿ ಕೆಲಕಾಲ ಹಾರಾಟ ನಡೆಸಿದ ತೇಜಸ್ವಿ ಸೂರ್ಯ ಅವರು ನಂತರ ಮಾತನಾಡಿ, ‘ಎಚ್‌ಎಎಲ್ ನಿರ್ಮಿಸಿರುವ ಎಚ್‌ಟಿಟಿ–40ಯಂತಹ ಯುದ್ಧ ವಿಮಾನಗಳು ಸ್ವಾವಲಂಬಿ ಹಾಗೂ ವೈಜ್ಞಾನಿಕ ಪರಾಕ್ರಮಕ್ಕೆ ಸಾಕ್ಷಿಯಾಗಿವೆ. ದೇಶಕ್ಕೆ ಸರಿಯಾದ ನಾಯಕತ್ವ ಮತ್ತು ಬೆಂಬಲ ಸಿಕ್ಕಾಗ ಇಂಥ ಸಂಸ್ಥೆಗಳಿಗೆ ಸಮರ್ಪಕ ಬೆಂಬಲ ಸಿಗಲಿದೆ’ ಎಂದರು.
‘ಹಿಂದಿನ ಯುಪಿಎ ಸರ್ಕಾರ ಮೂಲೆಗುಂಪು ಮಾಡಿದ್ದ ವಿಮಾನವು ಪ್ರಧಾನಿ ನರೇಂದ್ರ ಮೋದಿ ಹಾಗೂ ದಿವಂಗತ ಮನೋಹರ ಪರಿಕ್ಕರ್ ಅವರ ಪರಿಶ್ರಮದ ಫಲವಾಗಿ ವಾಯುಸೇನೆಯನ್ನು ಸೇರುವಂತಾಯಿತು. 2012ರಲ್ಲಿ ಸ್ವಿಸ್ ಕಂಪನಿ ಉತ್ಪಾದಿಸಿದ್ದ ಪಿಲಾಟಸ್ ಪಿಸಿ–7 ವಿಮಾನ ಖರೀದಿಗೆ ಅಂದಿನ ಸರ್ಕಾರ ಸಿದ್ಧತೆ ನಡೆಸಿತ್ತು. ಈ ಕಂಪನಿಯು ₹330 ಕೋಟಿ ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿತು. ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಇದರಿಂದಾಗಿ ಪಿಲಾಟಸ್ ಅನ್ನು 2019ರಲ್ಲಿ ಎನ್‌ಡಿಎ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿತು’ ಎಂದು ವಿವರಿಸಿದರು.
‘2014ರ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಚ್‌ಎಎಲ್ ಕಂಪನಿಗೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಇದರ ಫಲವಾಗಿ ಕಂಪನಿಯು ಎಚ್‌ಟಿಟಿ–40 ವಿಮಾನವನ್ನು 40 ತಿಂಗಳಲ್ಲೇ ಸಿದ್ಧಪಡಿಸಿ ನೀಡಿತು. ದೇಶಕ್ಕೆ ಉತ್ತಮ ನಾಯಕತ್ವ ಸಿಕ್ಕಾಗ ಮಾತ್ರ ವಿಜ್ಞಾನಿಗಳಿಗೆ ಪ್ರೋತ್ಸಾಹ ದೊರೆತು ಅತ್ಯುತ್ತಮವಾದದ್ದನ್ನು ಅನ್ವೇಷಿಸಲು ಸಾಧ್ಯ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಸ್ವದೇಶಿ ಕಂಪನಿಗೆ ಉತ್ತೇಜನ ನೀಡುವುದರಿಂದ ದೇಶದ ತೆರಿಗೆದಾತರ ಹಣ ವಿದೇಶಗಳ ಪಾಲಾಗುವುದು ತಪ್ಪಿದೆ. ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರದಿಂದ ಮುಕ್ತವಾದ ಭಾರತ ಆತ್ಮನಿರ್ಭರದತ್ತ ಸಾಗುತ್ತಿದೆ’ ಎಂದು ತೇಜಸ್ವಿ ಸೂರ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.