ADVERTISEMENT

ಬಗ್ಗಾ ಬಂಧನಕ್ಕೆ ವಿರೋಧ; ಎಎಪಿ ಕಚೇರಿಗೆ ಬಿಜೆಪಿ ಮುತ್ತಿಗೆ, ಗೋಮೂತ್ರ ಸಿಂಪಡಣೆ

ಪ್ರತಿಭಟನೆ: ಗೋಮೂತ್ರ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2022, 20:19 IST
Last Updated 7 ಮೇ 2022, 20:19 IST
ಆಸ್ಟಿನ್‌ಟೌನ್‌ನಲ್ಲಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಕಚೇರಿಗೆ ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು     – ಪ್ರಜಾವಾಣಿ ಚಿತ್ರ
ಆಸ್ಟಿನ್‌ಟೌನ್‌ನಲ್ಲಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಕಚೇರಿಗೆ ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು     – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೆಹಲಿಯ ಬಿಜೆಪಿ ಮುಖಂಡ ತಜಿಂದರ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ನಗರದ ಆಮ್‌ ಆದ್ಮಿ ಪಕ್ಷದ (ಎಎಪಿ) ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಖಂಡಿಸಿದ ಎಎಪಿ ಕಾರ್ಯಕರ್ತರು, ತಮ್ಮ ಪಕ್ಷದ ಕಚೇರಿ ಮುಂಭಾಗದಲ್ಲಿ ಗೋಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸಿ ಆಕ್ರೋಶ ಹೊರಹಾಕಿದರು.

ಮುತ್ತಿಗೆ ಯತ್ನ: ಆಸ್ಟಿನ್‌ ಟೌನ್‌ನಲ್ಲಿರುವ ಎಎಪಿ ಕಚೇರಿ ಎದುರು ಸೇರಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ‘ಎಎಪಿ ನೇತೃತ್ವದ ಪಂಜಾಬ್ ಸರ್ಕಾರ, ಬಿಜೆಪಿ ಮುಖಂಡನನ್ನು ಬಂಧಿಸಿರುವುದು ಸರಿಯಲ್ಲ. ಇದರ ಹಿಂದೆ ದುರುದ್ದೇಶ ಅಡಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನೆ ವೇಳೆ ಕೆಲ ಕಾರ್ಯಕರ್ತರು, ಎಎಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದರು. ಇದರಿಂದಾಗಿ ಪರಸ್ಪರ ತಳ್ಳಾಟವೂ ನಡೆಯಿತು. ನಂತರ, ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕೆಲ ಹೊತ್ತಿನ ನಂತರ ಬಿಟ್ಟು ಕಳುಹಿಸಿದರು.

ಗೋಮೂತ್ರದಿಂದ ಸ್ವಚ್ಛ: ಪ್ರತಿಭಟನೆ ಮುಗಿಯುತ್ತಿದ್ದಂತೆ ಎಎಪಿ ಕಾರ್ಯ ಕರ್ತರು, ತಮ್ಮ ಕಚೇರಿ ಮುಂಭಾಗವನ್ನು ಪೊರಕೆಯಿಂದ ಸ್ವಚ್ಛಗೊಳಿಸಿ ಗೋಮೂತ್ರ ಸಿಂಪಡಿಸಿದರು.

‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಮನೆ ಮೇಲೆ ದಾಳಿ ಮಾಡಿದ್ದ ಮಾದರಿಯಲ್ಲೇ ಬಿಜೆಪಿ ಕಾರ್ಯಕರ್ತರು, ಬೆಂಗಳೂರಿನ ಎಎಪಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಬೈಕ್‌ಗಳನ್ನು ತಳ್ಳಿ ಬೀಳಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದ್ದಾರೆ’ ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.