ADVERTISEMENT

ವಿನಯ ಗುರೂಜಿಗೆ ಬ್ಲ್ಯಾಕ್‌ಮೇಲ್: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 20:49 IST
Last Updated 7 ಮಾರ್ಚ್ 2020, 20:49 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಸುದ್ದಿ ವಿಡಿಯೊ ಪ್ರಸಾರ ಮಾಡಿ ಹೆಸರು ಹಾಳು ಮಾಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ 3ನೇ ಹಂತದ ಆಂಜನೇಯ ನಗರದ ರವಿಕುಮಾರ್ (48), ಕೆಂಗೇರಿ ಉಪನಗರ ಎಂ.ಪಿ.ಎಸ್ ಲೇಔಟ್‌ನ ಮುನಿರಾಜು (61),ಅಂದ್ರಹಳ್ಳಿ ಡಿ ಗ್ರೂಪ್ ಎಂಪ್ಲಾಯಿಮೆಂಟ್ ಲೇಔಟ್‌ನ (34), ಮನೋಜ್‌ ಕುಮಾರ್ (24) ಹಾಗೂ ಮಂಜುನಾಥ್ (40) ಬಂಧಿತರು.

‘ಕಾನೂನಿನ್ವಯ ಯಾವುದೇ ಮಾನ್ಯತೆ ಪಡೆಯದ ಆರೋಪಿಗಳು, ಯೂಟ್ಯೂಬ್‌ನಲ್ಲಿ ‘ಕಾವೇರಿ ಕನ್ನಡ ಟಿ.ವಿ’ ಹೆಸರಿನ ಚಾನೆಲ್‌ ಸೃಷ್ಟಿಸಿದ್ದರು. ಅದರ ಹೆಸರು ಹೇಳಿಕೊಂಡು ಪತ್ರಕರ್ತರ ಸೋಗಿನಲ್ಲಿ ಓಡಾಡುತ್ತಿದ್ದರು. ಸುಳ್ಳು ಸುದ್ದಿ ಪ್ರಸಾರ ಮಾಡುವುದಾಗಿ ಹೇಳಿ ಹಲವರನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ವಿನಯ್ ಗುರೂಜಿ ಅವರ ಬಗ್ಗೆ ಕೆಲ ವಿಡಿಯೊಗಳನ್ನು ಸಿದ್ಧಪಡಿಸಿದ್ದ ಆರೋಪಿಗಳು, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅವು
ಗಳನ್ನೇ ಭಕ್ತರಿಗೆ ಕಳುಹಿಸಿ, ಗುರೂಜಿಯ ಹೆಸರು ಹಾಳು ಮಾಡುವುದಾಗಿ ಹೇಳಿದ್ದರು. ವಿಡಿಯೊವನ್ನು ಪ್ರಸಾರ ಮಾಡಬಾರದೆಂದರೆ ₹30 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು.’ ‘ಹಣ ಪಡೆಯುವುದಕ್ಕಾಗಿ ಆರೋಪಿಗಳು, ಮಧ್ಯವರ್ತಿಗಳ ಮೂಲಕ ಭಕ್ತರನ್ನು ಹಲವು ಬಾರಿ ಸಂಪರ್ಕಿಸಿದ್ದರು. ಮೊಬೈಲ್‌ನಲ್ಲೂ ಮಾತನಾಡಿದ್ದರು. ಆರೋಪಿಗಳ ಸಂಭಾಷಣೆ ಆಡಿಯೊವನ್ನು ರೆಕಾರ್ಡ್ ಮಾಡಿಕೊಂಡಿದ್ದ ಭಕ್ತರೊಬ್ಬರು, ಸೈಬರ್‌ ಕ್ರೈಂ ಠಾಣೆಗೆ ಗುರುವಾರ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಅಧಿಕಾರಿ ವಿವರಿಸಿದರು.

ಬ್ಲ್ಯಾಕ್‌ಮೇಲ್‌ಗೆಂದೇ ಚಾನೆಲ್ ಸೃಷ್ಟಿ: ‘ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಬಹುದೆಂದು ಅಂದುಕೊಂಡಿದ್ದ ಆರೋಪಿಗಳು, ಅದಕ್ಕಾಗಿ ಯೂಟ್ಯೂಬ್‌ನಲ್ಲಿ ಚಾನೆಲ್‌ ಸೃಷ್ಟಿ ಮಾಡಿದ್ದರು. ಕಚೇರಿಯನ್ನೂ ತೆರೆದು ಕೆಲವೆಡೆ ತಾಲ್ಲೂಕು ಹಾಗೂ ಜಿಲ್ಲಾವಾರು ಪ್ರತಿನಿಧಿಗಳನ್ನೂ ನೇಮಿಸಿಕೊಂಡಿ ದ್ದರು’ ಎಂದು ಅಧಿಕಾರಿ ಹೇಳಿದರು.

‘ಆರಂಭದಲ್ಲಿ ವಿಡಿಯೊವನ್ನು ಆರೋಪಿಗಳು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಅದರ ಲಿಂಕ್‌ನ್ನು ಆರೋಪಿ ಮುರುಳಿಯೇ ಸಂಬಂಧಪಟ್ಟವರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ವಿನಯ್ ಗುರೂಜಿ ಪ್ರಕರಣದಲ್ಲೂ ಆತನೇ ಮಾತುಕತೆ ನಡೆಸಿದ್ದ. ಸಂಭಾಷಣೆಯ ಆಡಿಯೊವನ್ನು ಭಕ್ತರೇ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ’ ಎಂದರು.

‘ರಾಜ್ಯಮಟ್ಟದ ಚಾನೆಲ್‌ಗಳಲ್ಲೂ ಸುದ್ದಿ ಮಾಡಿಸುವುದಾಗಿ ಬೆದರಿಕೆ’
‘ವಿನಯ್ ಗುರೂಜಿ ಅವರ ಖಾಸಗಿ ವಿಡಿಯೊಗಳು ತಮ್ಮ ಬಳಿ ಇರುವುದಾಗಿ ಹೇಳಿದ್ದ ಆರೋಪಿಗಳು, ಅವುಗಳನ್ನು ರಾಜ್ಯಮಟ್ಟದ ಚಾನೆಲ್‌ಗಳಿಗೆ ಕೊಟ್ಟು ಸುದ್ದಿ ಮಾಡಿಸುವುದಾಗಿಯೂ ಬೆದರಿಸುತ್ತಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ರಾಜಕೀಯ ಮುಖಂಡರು ಗುರೂಜಿ ಬಳಿ ಬರುತ್ತಿದ್ದಾರೆ. ಅವರಿಗೆ ಒಳ್ಳೆಯ ಹೆಸರು ಇದೆ. ಅದು ಹಾಳಾಗಬಾರದೆಂದರೆ ₹30 ಲಕ್ಷ ಕೊಡಬೇಕು. ಇಲ್ಲದಿದ್ದರೆ, ಅವಹೇಳನಕಾರಿ ಸುದ್ದಿ ಮಾಡುತ್ತೇವೆ. ರಾಜ್ಯಮಟ್ಟದ ಚಾನೆಲ್ ವರದಿಗಾರರ ನಾವು ಹೇಳಿದಂತೆ ಕೇಳುತ್ತಾರೆ. ಅವರಿಗೂ ವಿಡಿಯೊಗಳನ್ನು ಕೊಡುತ್ತೇವೆ’ ಎಂಬುದಾಗಿಯೂ ಆರೋಪಿಗಳು ಹೇಳುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.