ಬೆಂಗಳೂರು: ವಾಯುಮಾಲಿನ್ಯ, ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಮಕ್ಕಳೂ ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ. ದೃಢ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚಿನವರು ರಕ್ತದ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ. ಇಲ್ಲಿನ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿಯ (ಪಿಬಿಸಿಆರ್) ವಿಶ್ಲೇಷಣೆಯಿಂದ ಇದು ದೃಢಪಟ್ಟಿದೆ.
ಪಿಬಿಸಿಆರ್ ಕ್ಯಾನ್ಸರ್ ದತ್ತಾಂಶಗಳನ್ನು ಸಂಗ್ರಹಿಸಿ, ಹೊಸ ಪ್ರಕರಣಗಳ ಏರಿಳಿತವನ್ನು ನಿರ್ಧರಿಸುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಡಿ (ಐಸಿಎಂಆರ್) ಈ ನೋಂದಣಿಯು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಚಿಕಿತ್ಸಾಲಯ, ಡಯಾಗ್ನಾಸ್ಟಿಕ್ ಸೆಂಟರ್ ಸೇರಿ ವಿವಿಧ ಮೂಲಗಳಿಂದ ಕ್ಯಾನ್ಸರ್ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಇದರ ಪ್ರಕಾರ ರಾಜ್ಯದಲ್ಲಿ 14 ವರ್ಷದೊಳಗಿನ ಮಕ್ಕಳ ಕ್ಯಾನ್ಸರ್ ಪ್ರಕರಣವೂ ಏರಿಕೆಯಾಗುತ್ತಿದ್ದು, ಕಳೆದ ವರ್ಷ 1,533 ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಈ ಪ್ರಕರಣಗಳಲ್ಲಿ 876 ಗಂಡುಮಕ್ಕಳಾದರೆ, 657 ಹೆಣ್ಣುಮಕ್ಕಳಾಗಿದ್ದಾರೆ.
ದೃಢ ಪ್ರಕರಣಗಳಲ್ಲಿ ರಕ್ತದ ಕ್ಯಾನ್ಸರ್‌ಗೆ ಹೆಚ್ಚಿನ ಮಕ್ಕಳು ಒಳಪಡುತ್ತಿದ್ದರೆ, ಮಿದುಳು ಹಾಗೂ ನರಸಂಬಂಧಿ ಕ್ಯಾನ್ಸರ್ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಎರಡನೇ ಪ್ರಮುಖ ಕ್ಯಾನ್ಸರ್ ಪ್ರಕಾರವಾಗಿದೆ. ಶೇ 73ರಷ್ಟು ಪ್ರಕರಣಗಳಲ್ಲಿ ಕಿಮೊಥೆರಪಿ ನಡೆಸಿದರೆ, ಶೇ 12ರಷ್ಟು ಪ್ರಕರಣಗಳಲ್ಲಿ ವಿಕಿರಣ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.
ಅಸ್ಥಿಮಜ್ಜೆ ಚಿಕಿತ್ಸೆ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಿಭಾಗವಿದ್ದು, ಪ್ರತಿ ವರ್ಷ 630 ಮಕ್ಕಳು ಹೊಸದಾಗಿ ದಾಖಲಾಗುತ್ತಿದ್ದಾರೆ. ರಕ್ತದ ಕ್ಯಾನ್ಸರ್ ಎದುರಿಸುತ್ತಿರುವ ಮಕ್ಕಳಿಗೆ ಅಲ್ಲಿ ಅಸ್ಥಿಮಜ್ಜೆ ಚಿಕಿತ್ಸೆಯನ್ನೂ ಒದಗಿಸಲಾಗುತ್ತಿದೆ. ಈಗಾಗಲೇ ನೂರಕ್ಕೂ ಅಧಿಕ ಮಂದಿಗೆ ಅಸ್ಥಿಮಜ್ಜೆ ಕಸಿ ಮಾಡಲಾಗಿದೆ.
‘ವಾಯುಮಾಲಿನ್ಯ, ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಸೇವನೆ, ಅನುವಂಶೀಯತೆ ಸೇರಿ ವಿವಿಧ ಕಾರಣಗಳಿಂದ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ತಪಾಸಣೆಯೂ ಹೆಚ್ಚುತ್ತಿರುವುದರಿಂದ ಪ್ರಕರಣಗಳು ದೃಢಪಡುತ್ತಿವೆ. ಹಿಂದೆ ಎಷ್ಟೋ ಮಂದಿಗೆ ಕ್ಯಾನ್ಸರ್ ಇರುವುದೇ ತಿಳಿದಿರುತ್ತಿರಲಿಲ್ಲ. ಸಾರ್ವಜನಿಕರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ’ ಎಂದು ಕಿದ್ವಾಯಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.
ವಯಸ್ಕರ ಜತೆಗೆ ಮಕ್ಕಳಲ್ಲಿಯೂ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ದೇಹದಲ್ಲಿ ಶಂಕಿತ ಗೆಡ್ಡೆ ಕಾಣಿಸಿಕೊಂಡರೆ ತಪಾಸಣೆಗೆ ಒಳಪಡಬೇಕು. ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭಡಾ.ಸಿ. ರಾಮಚಂದ್ರ ಕ್ಯಾನ್ಸರ್ ತಜ್ಞ
ಗಂಡುಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಕ್ಯಾನ್ಸರ್ ಕ್ಯಾನ್ಸರ್ ವಿಧ; ಪ್ರಮಾಣ (ಶೇ) ರಕ್ತದ ಕ್ಯಾನ್ಸರ್;45 ಲಿಂಫೊಮಾ ಕ್ಯಾನ್ಸರ್;14.5 ಮಿದುಳು ನರ ಸಂಬಂಧಿ ಕ್ಯಾನ್ಸರ್;12.9 ಮೂಳೆ ಸಂಬಂಧಿ ಕ್ಯಾನ್ಸರ್;5.6 ಕಣ್ಣಿಗೆ ಸಂಬಂಧಿಸಿದ ಕ್ಯಾನ್ಸರ್;2.6 ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಕ್ಯಾನ್ಸರ್ ಕ್ಯಾನ್ಸರ್ ವಿಧ; ಪ್ರಮಾಣ (ಶೇ) ರಕ್ತದ ಕ್ಯಾನ್ಸರ್;44.6 ಮಿದುಳು ನರ ಸಂಬಂಧಿ ಕ್ಯಾನ್ಸರ್;12.1 ಲಿಂಫೊಮಾ ಕ್ಯಾನ್ಸರ್;9.5 ಮೂಳೆ ಸಂಬಂಧಿ ಕ್ಯಾನ್ಸರ್;5.8 ಅಂಗಾಂಶಕ್ಕೆ ಸಂಬಂಧಿಸಿದ ಕ್ಯಾನ್ಸರ್;3.4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.