ADVERTISEMENT

ಟೆಕ್ಕಿಗಳೇ.. ಸಂಚಾರ ನಿಯಮ ಉಲ್ಲಂಘಿಸೀರಿ ಜೋಕೆ; ಕಂಪನಿಗೆ ಸಲ್ಲಿಕೆಯಾಗಲಿದೆ ಮಾಹಿತಿ

ಪಿಟಿಐ
Published 16 ಡಿಸೆಂಬರ್ 2023, 10:54 IST
Last Updated 16 ಡಿಸೆಂಬರ್ 2023, 10:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರಸ್ತೆಯಲ್ಲಿ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವ ಹಾಗೂ ಸಿಗ್ನಲ್ ಜಂಪ್ ಮಾಡುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವ ಟೆಕ್ಕಿಗಳ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗಳಿಗೆ ಕಳುಹಿಸುವ ವಿನೂತನ ವಿಧಾನವನ್ನು ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಜಾರಿಗೆ ತಂದಿದ್ದಾರೆ.

ಬೆಂಗಳೂರು ಪೂರ್ವ ಸಂಚಾರ ವಿಭಾಗವು ಈ ಸುರಕ್ಷತಾ ಕ್ರಮವನ್ನು ಜಾರಿಗೆ ತಂದಿದ್ದು, ಐಟಿ ಕಂಪನಿಗಳೇ ಹೆಚ್ಚಿರುವ ಹೊರ ವರ್ತುಲ ರಸ್ತೆ ಹಾಗೂ ವೈಟ್‌ಫೀಲ್ಡ್‌ ಪ್ರದೇಶಗಳಲ್ಲಿ ಪೊಲೀಸರು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ADVERTISEMENT

‘ಸದ್ಯ ಈ ಯೋಜನೆ ಬೆಂಗಳೂರು ಪೂರ್ವ ವಿಭಾಗಕ್ಕಷ್ಟೇ ಸೀಮಿತಗೊಳಿಸಲಾಗಿದೆ. ಇಲ್ಲಿ ಇದು ಯಶಸ್ವಿಯಾದರೆ, ಮುಂದೆ ಇದನ್ನು ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸಲಾಗುವುದು’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಐಟಿ ಕಂಪನಿಗಳೇ ಹೆಚ್ಚಿರುವ ಪ್ರದೇಶಗಳಲ್ಲಿ ನೌಕರರು ತಮ್ಮ ಕಚೇರಿಗೆ ತ್ವರಿತವಾಗಿ ತೆರಳಲು ಸಿಗ್ನಲ್ ಉಲ್ಲಂಘಿಸುವ ಅಥವಾ ವೇಗವಾಗಿ ವಾಹನ ಚಾಲನೆ ಮಾಡುವ ಬಹಳಷ್ಟು ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವೆಲ್ಲವೂ ಸಂಚಾರ ನಿಮಯ ಉಲ್ಲಂಘನೆಯ ಭಾಗವೇ ಆಗಿವೆ’ ಎಂದಿದ್ದಾರೆ.

‘ನೂತನ ಕ್ರಮದ ಅನ್ವಯ ಯಾವುದೇ ಐಟಿ ಕಂಪನಿ ಉದ್ಯೋಗಿ ಸಂಚಾರ ನಿಯಮ ಉಲ್ಲಂಘಿಸಿದರೆ ಅದರ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗೆ ಇ–ಮೇಲ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವುದು. ವಾಹನ ಚಾಲನೆ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿ ಮತ್ತು ಜವಾಬ್ದಾರಿಯುತರಾಗಿರಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದು ಬೆಂಗಳೂರು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

‘ಈ ಯೋಜನೆ ಭಾಗವಾಗಿ ಸಂಚಾರ ನಿಯಮ ಉಲ್ಲಂಘಿಸುವ ಟೆಕ್ಕಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ಅವರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ. ಅದನ್ನು ಆಧರಿಸಿ ಟೆಕ್ಕಿಗಳು ಉಲ್ಲಂಘಿಸಿರುವ ಸಂಚಾರ ನಿಯಮಗಳ ಪಟ್ಟಿಯನ್ನು ಕಂಪನಿಗೆ ಕಳುಹಿಸಲಿದ್ದಾರೆ’ ಎಂದು ವಿವರಿಸಿದರು.

‘ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವಂತೆಯೂ ಕಂಪನಿಗಳಿಗೆ ಸೂಚಿಸಲಾಗುವುದು. ಈ ಕಾರ್ಯಕ್ಕೆ ಸಂಚಾರ ವಿಭಾಗದ ಪೊಲೀಸರನ್ನೂ ಆಹ್ವಾನಿಸಬಹುದು’ ಎಂದು ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.