ADVERTISEMENT

ಸುನಿತಾ ವಿಲಿಯಮ್ಸ್‌ಗೆ ಅಭಿನಂದನೆ: ನೆಟ್ಟಿಗರಿಂದ ಗೇಲಿಗೊಳಗಾದ ‘ನಮ್ಮ ಮೆಟ್ರೊ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2025, 6:57 IST
Last Updated 20 ಮಾರ್ಚ್ 2025, 6:57 IST
   

ಬೆಂಗಳೂರು: ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಅಭಿನಂದಿಸಿ ಬಿಎಂಆರ್‌ಸಿಎಲ್‌ ಹಾಕಿರುವ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತವಾಗುವ ಬದಲು ಹತಾಶ ಪ್ರಯಾಣಿಕರಿಂದ ಟೀಕೆಗಳ ಸರಮಾಲೆಯೇ ಬಂದಿದೆ.

ಪ್ರಯಾಣ ದರ ಏರಿಕೆ, ಹೊಸ ಮಾರ್ಗಗಳ ನಿರ್ಮಾಣದಲ್ಲಿ ವಿಳಂಬ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಮೆಂಟ್‌ ವಿಭಾಗದಲ್ಲಿ ಪ್ರಸ್ತಾಪಿಸಿರುವ ಪ್ರಯಾಣಿಕರು, ಮೊದಲು ನಿಮ್ಮ ಕೆಲಸದ ಮೇಲೆ ಗಮನಹರಿಸಿ ಎಂದು ಹೇಳಿದ್ದಾರೆ.

ಬುಧವಾರ ಸುನಿತಾ, ಬುಚ್‌ ಅವರಿಗೆ ಅಭಿನಂದಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಎಂಆರ್‌ಸಿಎಲ್‌, ‘ಗಗನಯಾತ್ರಿಗಳಿಗೆ ಭೂಮಿಗೆ ಸ್ವಾಗತ. ನಿಮ್ಮ ಸಾಧನೆ ನಮಗೆ ಹೆಮ್ಮೆ ಪಡುವಂತೆ ಮಾಡಿದೆ’ ಎಂದು ಬರೆದುಕೊಂಡಿತ್ತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ‘ಮೆಟ್ರೊ ದರ ಯಾವಾಗ ಭೂಮಿಗೆ ಬರುತ್ತದೆ’ ಎಂದು ಕೇಳಿದ್ದಾರೆ.

'ನಿಮ್ಮ ಸಾಧನೆಗಳ ಬಗ್ಗೆ ನಾವು ಹೆಮ್ಮೆ ಪಡಬೇಕೆಂದು ನೀವು ಭಾವಿಸುವುದಿಲ್ಲವೇ?’ ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.

‘ಹಳದಿ ಮತ್ತು ಗುಲಾಬಿ ಮಾರ್ಗದ ಕೆಲಸಗಳು ಹಿಂದೆ ಬಿದ್ದು ಒದ್ದಾಡುತ್ತಿವೆ. ನಿಮ್ಮ ಕೆಲಸ ಮಾಡೋದು ಬಿಟ್ಟು ಇದಕ್ಕೆಲ್ಲ ಸಮಯ ಹಾಳು ಮಾಡಬೇಡಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

‘ಮೊದಲು ನಿಮ್ಮ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ’ ಎಂದು ನೆಟ್ಟಿಗರು ಹರಿಹಾಯ್ದಿದ್ದಾರೆ.

ಇತ್ತೀಚೆಗೆ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 47ರಷ್ಟು ಹೆಚ್ಚಿಸಿ ಬಿಎಂಆರ್‌ಸಿಎಲ್‌ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆ ದರದಲ್ಲಿ ಅಲ್ಪ ಕಡಿಮೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.