ADVERTISEMENT

ಬೆಂಗಳೂರು: ಬಿಎಂಟಿಸಿ ಬಸ್‌ ಚಕ್ರ ಹರಿದು ವೃದ್ಧರಿಬ್ಬರ ಸಾವು

ಮಡಿವಾಳ, ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 14:33 IST
Last Updated 20 ನವೆಂಬರ್ 2025, 14:33 IST
ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಬಸ್ 
ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಬಸ್    

ಬೆಂಗಳೂರು: ಮಡಿವಾಳ ಹಾಗೂ ವಿಜಯನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಬಿಎಂಟಿಸಿ ಬಸ್‌ ಚಕ್ರ ಹರಿದು ವೃದ್ಧರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ನಡೆದ ಸರಣಿ ಅಪಘಾತದಲ್ಲಿ ರೂಪೇನ ಅಗ್ರಹಾರದ ನಿವಾಸಿ ವೆಂಕಟರಾಮಪ್ಪ(65) ಅವರು ಮೃತಪಟ್ಟಿದ್ದಾರೆ.

ವೆಂಕಟರಾಮಪ್ಪ ಅವರು ತಮ್ಮ ಮನೆಯ ಎದುರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ತರಕಾರಿ ಖರೀದಿಸಲೆಂದು ಗುರುವಾರ ಬೆಳಿಗ್ಗೆ ಮಡಿವಾಳದ ಮಾರುಕಟ್ಟೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

ಎರಡು ಸರಕು ಸಾಗಣೆ ವಾಹನಗಳಿಗೆ ಬಿಎಂಟಿಸಿ ಬಸ್‌ ಮೊದಲು ಡಿಕ್ಕಿ ಹೊಡೆದಿತ್ತು. ನಂತರ, ರಸ್ತೆಬದಿಯಲ್ಲಿ ನಡೆದು ತೆರಳುತ್ತಿದ್ದ ವೆಂಕಟರಾಮಪ್ಪ ಅವರಿಗೂ ಬಸ್ ಡಿಕ್ಕಿ ಆಗಿತ್ತು. ಆಗ ಅವರು ಕೆಳಗೆ ಬಿದ್ದಿದ್ದರು. ಅವರ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ಬೈಯ್ಯಪ್ಪನಹಳ್ಳಿಯಿಂದ ಸಿಲ್ಕ್‌ಬೋರ್ಡ್ ಕಡೆಗೆ ಬಸ್ ತೆರಳುತ್ತಿತ್ತು. ಬಸ್ ಚಾಲಕ ಶ್ರೀನಿವಾಸ್‍ ಅವರ ನಿರ್ಲಕ್ಷ್ಯ ಹಾಗೂ ಅತಿ ವೇಗವೇ ಅಪಘಾತಕ್ಕೆ ಕಾರಣ. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಡಿವಾಳ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋವಿಂದರಾಜ ನಗರದ ಸರ್ವಜ್ಞ ಜಂಕ್ಷನ್‍ನಲ್ಲಿ ಬಿಎಂಟಿಸಿ ಬಸ್ ಚಕ್ರ ಹರಿದು ಸುಶೀಲಾ (69) ಅವರು ಮೃತಪಟ್ಟಿದ್ದಾರೆ.

ನಾಗರಬಾವಿ ನಿವಾಸಿ ಸುಶೀಲಾ ಅವರು ಗೋವಿಂದರಾಜನಗರದ ಬ್ಯಾಂಕ್‍ಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ.

ಬಿಎಂಟಿಸಿ ಬಸ್‍ನಲ್ಲಿ ಗೋವಿಂದರಾಜ ನಗರಕ್ಕೆ ಬಂದಿದ್ದ ಅವರು ಕೆಳಗಿಳಿದು ರಸ್ತೆ ದಾಟುತ್ತಿದ್ದರು. ಈ ವೇಳೆ ಚಾಲಕ, ಸುಶೀಲಾ ಅವರನ್ನು ಗಮನಿಸದೇ ಬಸ್ ಚಾಲನೆ ಮಾಡಿದ್ದಾರೆ. ಆಗ ಬಸ್ ಚಕ್ರ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಎಂಟಿಸಿಯ 30ನೇ ಡಿಪೊಗೆ ಸೇರಿದ ಬಸ್, ಕೆಂಗೇರಿಯಿಂದ ಯಲಹಂಕಕ್ಕೆ ತೆರಳುತ್ತಿತ್ತು.

ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ. ಚಾಲಕನನ್ನು ಬಂಧಿಸಿ, ಬಸ್ ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.