ADVERTISEMENT

ಬಸ್‌ಪಾಸ್‌ಗೆ ₹335 ಕೋಟಿ ಅನುದಾನಕ್ಕೆ ಬೇಡಿಕೆ

ಜನರ ಮೇಲೆ ಬೀಳಬೇಕಿದ್ದ ಅಧಿಕ ಹೊರೆ ನಿಗಮಗಳ ಹೆಗಲಿಗೆ

ವಿಜಯಕುಮಾರ್ ಎಸ್.ಕೆ.
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ದರ ಏರಿಕೆಗೆ ಅನುಮತಿ ನೀಡದ ಸರ್ಕಾರದಿಂದ ಹೆಚ್ಚುವರಿ ₹ 335 ಕೋಟಿ ಅನುದಾನ ಕೋರಿ ನಾಲ್ಕು ಸಾರಿಗೆ ನಿಗಮಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ.

2019–20ನೇ ಸಾಲಿನಲ್ಲಿ ₹1,183 ಕೋಟಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದ ನಿಗಮಗಳಿಗೆ ಸರ್ಕಾರ, ₹ 848 ಕೋಟಿ ಅನುದಾನ ಹಂಚಿಕೆ ಮಾಡಿದೆ. ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ನಾಲ್ಕು ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಈಗಾಗಲೇ ನಷ್ಟದಲ್ಲಿರುವ ನಾಲ್ಕು ನಿಗಮಗಳಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ 2019–20ನೇ ಸಾಲಿನ ವಿದ್ಯಾರ್ಥಿಗಳ ಬಸ್ ಪಾಸ್‌ ದರವನ್ನು ₹100ರಿಂದ ₹200ರಷ್ಟು ಹೆಚ್ಚಳ ಮಾಡಿದ್ದವು.ಆದರೆ, ವಿದ್ಯಾರ್ಥಿಗಳ ವಿರೋಧ ಮತ್ತು ಸರ್ಕಾರ ಇದಕ್ಕೆ ಅನುಮತಿ ನೀಡದ ಕಾರಣ ಪಾಸ್ ದರ ಹೆಚ್ಚಳ ಆದೇಶವನ್ನು ಅದೇ ದಿನ ವಾಪಸ್ ಪಡೆದುಕೊಂಡವು.

ADVERTISEMENT

ಪಾಸ್ ದರ ಏರಿಕೆಗೂ ಕಡಿವಾಣ ಹಾಕಿರುವ ಸರ್ಕಾರ, ನಷ್ಟ ಸರಿದೂಗಿಸಿಕೊಳ್ಳಲು ಹಣ ಒದಗಿಸದಿದ್ದರೆ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ.

ಸರ್ಕಾರದ ಪಾಲು ಎಷ್ಟು: ವಿದ್ಯಾರ್ಥಿ ಗಳ ಬಸ್ ಪಾಸ್‌ಗೆ ಸರ್ಕಾರ ಶೇ 50ರಷ್ಟು ಪಾಲು ನೀಡಿದರೆ, ನಿಗಮಗಳು ಶೇ 25ರಷ್ಟು ಮತ್ತು ವಿದ್ಯಾರ್ಥಿಗಳು ಶೇ 25ರಷ್ಟು ಪಾಲು ನೀಡುತ್ತಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ವರ್ಗದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಈ ಹೊರೆಯಿಂದ ವಿನಾಯಿತಿ ನೀಡಲಾಗಿದೆ.

ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಹೋಲಿಸಿದರೆ ಕರ್ನಾಟಕ ಸರ್ಕಾರ ನೀಡುತ್ತಿರುವ ಪಾಲು ಕಡಿಮೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ಮತ್ತು ವಿದ್ಯಾರ್ಥಿಗಳೇ ಭರಿಸುತ್ತಿದ್ದು, ನಿಗಮಗಳ ಮೇಲೆ ಹೊರೆ ಇಲ್ಲವೇ ಇಲ್ಲ ಎನ್ನುತ್ತವೆ ಮೂಲಗಳು.

‘ವಿದ್ಯಾರ್ಥಿಗಳ ರಿಯಾಯಿತಿ ಪಾಸುಗಳ ವೆಚ್ಚದ ಮರುಪಾವತಿಯಲ್ಲಿ 5 ವರ್ಷಗಳಿಂದ ಒಟ್ಟು ₹ 2,452 ಕೋಟಿ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿದೆ. ಬಸ್ ಪಾಸ್ ದರ ಏರಿಕೆಗೂ ಅವಕಾಶ ನೀಡದೆ, ಸರ್ಕಾರವೂ ಭರಿಸಿಕೊಡದೆ ನಿಗಮಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಹೇಳುತ್ತಾರೆ. ಈ ಎಲ್ಲಾ ಅಂಶಗಳನ್ನುಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿಕೊಡ ಲಾಗಿದೆ ಎಂದು ಅವರು ತಿಳಿಸಿದರು.

ಹೊರೆ ಕಡಿಮೆ ಪ್ರಸ್ತಾವನೆ

ವಿದ್ಯಾರ್ಥಿ ಬಸ್ ಪಾಸ್ ವಿಷಯದಲ್ಲಿ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯಾದ ಪರಿಪಾಠವಿದೆ. ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಗಳೂ ಶೇ 25ರಷ್ಟು ಹೊರೆ ಹೊರುತ್ತಿವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದರು.

‘ಈ ಭಾರವನ್ನು ಆದಷ್ಟು ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.