
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಚಲಿಸುತ್ತಿರುವ ಬಿಎಂಟಿಸಿ ಬಸ್‌ನಲ್ಲಿಯೇ ಕವಿಗೋಷ್ಠಿಯನ್ನು ಶನಿವಾರ ನಡೆಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ‘ಕಸಾಪ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಂಟಿಸಿ ಬಸ್‌ನಲ್ಲಿ ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ನಡೆಯಬೇಕು’ ಎಂದು ಹೇಳಿದರು.
ಚಿಕ್ಕಬಾಣಾವರದ ಸಂತೇಬೀದಿಯ ಬಸ್ ನಿಲ್ದಾಣದಲ್ಲಿ ಕವಿಗೋಷ್ಠಿ ನಡೆಯುವ ಬಸ್‌ಗೆ ಚಾಲನೆ ನೀಡಲಾಯಿತು. ಕಸಾಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಲಿಂಗರಾಜು ಎ. ಕಾಳೇನಹಳ್ಳಿ ಮೇಷ್ಟ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್, ಯಶವಂತಪುರ, ಮಲ್ಲೇಶ್ವರ, ನವರಂಗ, ನಂದಿನಿ ಬಡಾವಣೆ, ಹೆಗ್ಗನಹಳ್ಳಿ ಕ್ರಾಸ್, ರಾಜಗೋಪಾಲನಗರದಲ್ಲಿ ಸಂಚರಿಸಿದ ಬಸ್, ಚಿಕ್ಕಬಾಣಾವರಕ್ಕೆ ಮರಳಿತು. ವಿ.ಟಿ.ರಾಮಕೃಷ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಪ್ರಯಾಣಿಕರು ಕವಿತೆಗಳನ್ನು ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.