ADVERTISEMENT

ಬಿಎಂಟಿಸಿ | ಸ್ಮಾರ್ಟ್‌ ಇಟಿಎಂ: ಟೆಂಡರ್‌ ರದ್ದು

ಬಾಲಕೃಷ್ಣ ಪಿ.ಎಚ್‌
Published 25 ಮೇ 2025, 23:31 IST
Last Updated 25 ಮೇ 2025, 23:31 IST
ಸ್ಮಾರ್ಟ್‌ ಇಟಿಎಂ
ಸ್ಮಾರ್ಟ್‌ ಇಟಿಎಂ   

ಬೆಂಗಳೂರು: ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ), ವಿಸಾ ಕಾರ್ಡ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಪ್ರಯಾಣದ ಟಿಕೆಟ್‌ ಖರೀದಿಸಲು ಅವಕಾಶ ನೀಡಲು ಬೇಕಿದ್ದ ಆಧುನಿಕ ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ಗಾಗಿ (ಇಟಿಎಂ) ಬಿಎಂಟಿಸಿ ಕರೆದಿದ್ದ ಟೆಂಡರ್‌ ಬಿಡ್‌ದಾರರ ನಿರಾಸಕ್ತಿಯಿಂದಾಗಿ ರದ್ದಾಗಿದೆ.

ಬಿಎಂಟಿಸಿಯಲ್ಲಿ ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ ಈಗಾಗಲೇ ಇದೆ. ಕಾಗದದ ಟಿಕೆಟ್‌ ನೀಡುವ ವ್ಯವಸ್ಥೆಗೆ ಪರ್ಯಾಯವಾಗಿ ತಂದಿರುವ ಈ ಮಷಿನ್‌ನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲ. ಯುಪಿಐ ಆಧಾರಿತವಾಗಿ ಟಿಕೆಟ್‌ ನೀಡುವ ವ್ಯವಸ್ಥೆ ಬಿಎಂಟಿಸಿಯಲ್ಲಿ ಜಾರಿಯಲ್ಲಿದೆ. ಅದಕ್ಕಾಗಿ ಪ್ರತ್ಯೇಕವಾಗಿ ಕ್ಯೂಆರ್‌ ಕೋಡ್‌ಗಳನ್ನು ಬಸ್‌ಗಳಲ್ಲಿ ಅಂಟಿಸಲಾಗಿದೆ.

ಎಲ್ಲ ಸೌಲಭ್ಯಗಳು ಒಂದೇ ಮಷಿನ್‌ನಲ್ಲಿ ಸಿಗುವಂತಾಗಬೇಕು ಎಂಬ ಕಾರಣಕ್ಕೆ ಆ್ಯಂಡ್ರಾಯ್ಡ್‌ ಸೌಲಭ್ಯ ಇರುವ ಸ್ಮಾರ್ಟ್‌ ಇಟಿಎಂಗಳನ್ನು ಬಸ್‌ ನಿರ್ವಾಹಕರಿಗೆ ನೀಡಲು ನಿರ್ಧರಿಸಲಾಗಿತ್ತು. ಹೊಸ ಇಟಿಎಂನಲ್ಲಿ ಎನ್‌ಸಿಎಂಸಿ ಬಳಕೆಗೆ ಅವಕಾಶ ಇರುವುದರಿಂದ ಮೆಟ್ರೊಗೂ ಬಿಎಂಟಿಸ್‌ ಬಸ್‌ ಮತ್ತು ಮೆಟ್ರೊ ರೈಲಿನಲ್ಲಿ ಒಂದೇ ಕಾರ್ಡ್‌ನಲ್ಲಿ ಪ್ರಯಾಣಿಸಲು ಸಾಧ್ಯವಿತ್ತು.

ADVERTISEMENT

ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ ಇಟಿಎಂಗಳನ್ನು ಬಾಡಿಗೆ ಆಧಾರದಲ್ಲಿ ಪೂರೈಸಲು ಬಿಎಂಟಿಸಿ ಟೆಂಡರ್‌ ಕರೆದಿತ್ತು. ಬಿಡ್‌ ಸಲ್ಲಿಸಲು ಮೇ 13 ಕೊನೇ ದಿನಾಂಕವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬಿಡ್‌ದಾರರು ಪಾಲ್ಗೊಳ್ಳದ ಕಾರಣ ಟೆಂಡರ್‌ ರದ್ದು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಗದುರಹಿತ ಟಿಕೆಟ್ ವ್ಯವಸ್ಥೆ ಜಾರಿಯ ಭಾಗವಾಗಿ ಸುಮಾರು 10 ಸಾವಿರ ಸ್ಮಾರ್ಟ್ ಇಟಿಎಂಗಳನ್ನು ಅಳವಡಿಸಲು ಮರು ಟೆಂಡರ್‌ ಕರೆಯಲಾಗುವುದು. ಒಮ್ಮೆ ಪೂರೈಕೆ ಆರಂಭವಾದ ನಂತರ ಹಂತಹಂತವಾಗಿ ಎಲ್ಲ ಬಸ್‌ಗಳಲ್ಲಿ ಸ್ಮಾರ್ಟ್‌ ಇಟಿಎಂ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು. ಟಿಕೆಟ್ ಹಾಗೂ ಚಿಲ್ಲರೆ ನೀಡಲು ಈಗ ನಿರ್ವಾಹಕರಿಗೆ ಹೆಚ್ಚಿನ ಸಮಯ ಬೇಕಾಗುತ್ತಿದೆ. ಸುಧಾರಿತ ಸ್ಮಾರ್ಟ್‌ ಇಟಿಎಂ ಬಂದಾಗ ಈ ಸಮಸ್ಯೆಗಳು ತಪ್ಪಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌ ಆರ್. ತಿಳಿಸಿದರು.

ರಾಮಲಿಂಗಾರೆಡ್ಡಿ
ಕಿರಿಕಿರಿ ತಪ್ಪಿಸಲಿರುವ ಸ್ಮಾರ್ಟ್‌ ಇಟಿಎಂ
‘ನಗದುರಹಿತ ಟಿಕೆಟ್ ವ್ಯವಸ್ಥೆ ಜಾರಿಗಾಗಿ ಬಾಡಿಗೆ ಆಧಾರದಲ್ಲಿ 10 ಸಾವಿರ ಸುಧಾರಿತ ಆಧುನಿಕ ತಂತ್ರಜ್ಞಾನ ಇರುವ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ಇಟಿಎಂ) ಗಳನ್ನು ಬಿಎಂಟಿಸಿಯಲ್ಲಿ ಬಳಕೆಗೆ ಒದಗಿಸಲಾಗುವುದು. ಷರತ್ತುಗಳನ್ನು ಇನ್ನಷ್ಟು ಸರಳ ಮಾಡಿ ಮರು ಟೆಂಡರ್‌ ಕರೆಯಲಾಗುವುದು. ನಾಲ್ಕೈದು ತಿಂಗಳ ಒಳಗೆ ಇಟಿಎಂಗಳನ್ನು ನಿರ್ವಾಹಕರಿಗೆ ಒದಗಿಸಲಾಗುವುದು. ಟಿಕೆಟ್ ಮುದ್ರಣವಾಗಲು ತಡವಾಗುವ ಸಮಸ್ಯೆ ಹೊಸ ಸ್ಮಾರ್ಟ್ ಇಟಿಎಂ ಯಂತ್ರದಲ್ಲಿ ಇರುವುದಿಲ್ಲ. ಇದರಿಂದ ನಿರ್ವಾಹಕರಿಗೆ ಕಿರಿಕಿರಿ ಉಂಟಾಗುವುದಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.