ADVERTISEMENT

ನಾಳೆಯಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್‌ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:06 IST
Last Updated 14 ನವೆಂಬರ್ 2018, 19:06 IST
   

ಬೆಂಗಳೂರು:ಬಿಎಂಟಿಸಿವಿದ್ಯಾರ್ಥಿಪಾಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ನಾಳೆಯಿಂದ (ನ. 16) ಕಡ್ಡಾಯವಾಗಿ ಬಸ್‌ಪಾಸ್‌ ತೋರಿಸಿಯೇ ಪ್ರಯಾಣಿಸಬೇಕು.

ಇದುವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರ ಅಥವಾ ಮೊಬೈಲ್‌ ಸಂದೇಶ ತೋರಿಸಿ ಪ್ರಯಾಣಿಸುತ್ತಿದ್ದರು. ಪಾಸ್‌ ವಿತರಣೆಯಲ್ಲಾದ ಗೊಂದಲ, ಕಂಪ್ಯೂಟರ್‌ ಸಮಸ್ಯೆ ಇತ್ಯಾದಿಯಿಂದಾಗಿ ಅರ್ಜಿ ಸಲ್ಲಿಕೆ, ಪಾಸ್‌ ವಿತರಣೆ ಅವಧಿಯನ್ನು ವಿಸ್ತರಿಸಲಾಗಿತ್ತು. ನ. 15ರವರೆಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈಗಾಗಲೇ ಶೇ 90ರಷ್ಟು ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ ವಿತರಿಸಲಾಗಿದೆ. ಪ್ರತಿದಿನ 7ರಿಂದ 8 ಸಾವಿರದಷ್ಟು ಪಾಸ್‌ ವಿತರಿಸಲಾಗುತ್ತಿತ್ತು. ಅದು 800ಕ್ಕೆ ಇಳಿದಿದೆ. ಕೌಂಟರ್‌ ಮುಂದಿನ ದಟ್ಟಣೆ ಈಗ ಇಲ್ಲ. ಇನ್ನೂ ಬಸ್‌ಪಾಸ್‌ ಪಡೆಯದ ವಿದ್ಯಾರ್ಥಿಗಳ ಶಾಲೆಗಳನ್ನು ಸಂಪರ್ಕಿಸಿ ಬಸ್‌ಪಾಸ್‌ ಪಡೆಯುವಂತೆ ಮಾಹಿತಿ ನೀಡಿದ್ದೇವೆ. ಅರ್ಜಿ ಸಲ್ಲಿಸಿದವರು ಬಸ್‌ಪಾಸ್‌ ಪಡೆದು ಪ್ರಯಾಣಿಸಬೇಕು. ಹೊಸ ಅರ್ಜಿ ಸಲ್ಲಿಸಿ ಬಸ್‌ಪಾಸ್‌ ಪಡೆಯಲು ಅವಕಾಶವಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್‌.ವಿಶ್ವನಾಥ್‌ ಮಾಹಿತಿ ನಿಡಿದರು.

ADVERTISEMENT

ಬಸ್‌ಪಾಸ್‌ಗೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 29ರಂದು ಭಾರೀ ಸಂಖ್ಯೆಯಲ್ಲಿ ಬಿಎಂಟಿಸಿಯ ಮೆಜೆಸ್ಟಿಕ್‌ ಕಚೇರಿಯಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಪಾಸ್‌ ವಿತರಣೆಯಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಮೆಜೆಸ್ಟಿಕ್‌ ಹಾಗೂ ಶಾಂತಿನಗರ ಬಸ್‌ ನಿಲ್ದಾಣದಲ್ಲೂ ಪಾಸ್‌ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.