ADVERTISEMENT

‘ಎಡ್ಯುವರ್ಸ್‌’: ವಿದ್ಯಾರ್ಥಿಗಳಿಗೆ ತಜ್ಞರ ಮಾರ್ಗದರ್ಶನ

22–23ರಂದು ನಡೆಯುವ ಅತಿ ದೊಡ್ಡ ಶೈಕ್ಷಣಿಕ ಮೇಳ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 7:33 IST
Last Updated 20 ಏಪ್ರಿಲ್ 2023, 7:33 IST
 ರಮೇಶ್ ಅರವಿಂದ್ 
 ರಮೇಶ್ ಅರವಿಂದ್    

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌: ಜ್ಞಾನ ದೇಗುಲ–2023’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಜ್ಞರಿಂದ ವಿವಿಧ ಕೋರ್ಸ್‌ಗಳ ಬಗ್ಗೆ ಮಾರ್ಗದರ್ಶನ ದೊರೆಯಲಿದೆ.

ಇದೇ ತಿಂಗಳು 22 ಮತ್ತು 23ರಂದು ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ಈ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ.

ಎರಡು ದಿನದ ಮೇಳ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಚಲನಚಿತ್ರ ನಟ ರಮೇಶ್ ಅರವಿಂದ್ ಅವರು 13ನೇ ಆವೃತ್ತಿಯ ಮೇಳವನ್ನು ಶನಿವಾರ ಉದ್ಘಾಟಿಸಲಿದ್ದಾರೆ. ಕಾಮೆಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್‌. ಕುಮಾರ್
ಕಾಮೆಡ್‌–ಕೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎ.ಎಸ್. ರವಿ ಅವರು ಸಿಇಟಿ ಬಗ್ಗೆ
ಭಾನುವಾರ ಮಾರ್ಗದರ್ಶನ ಮಾಡಲಿದ್ದಾರೆ. ಎಂಜಿನಿಯರಿಂಗ್ ಕೋರ್ಸ್‌ಗಳ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್ ಅವರು ಉಪನ್ಯಾಸ ನೀಡಲಿದ್ದಾರೆ. ವೈದ್ಯಕೀಯ ಸೇರಿ ವಿವಿಧ ವಿಷಯಗಳ ಬಗ್ಗೆ ಸಂವಾದಗಳು ಇರಲಿದ್ದು, ಮಣಿಪಾಲ್ ಆಸ್ಪತ್ರೆಯ ಡಾ. ರಾಜನ್ ಶೆಟ್ಟಿ ಹಾಗೂ ಅಕ್ಷರಾ ದಾಮ್ಲೆ ಅವರು ಪಾಲ್ಗೊಳ್ಳಲಿದ್ದಾರೆ. ಪಾಲಕರಿಗೂ ವಿಷಯದ ತಜ್ಞರು ಮಾರ್ಗದರ್ಶನ, ಸಲಹೆಗಳನ್ನು ನೀಡಲಿದ್ದು, ಕೃಷ್ಣ ಗೌಡ, ರಾಘವೇಂದ್ರ ಆಚಾರ್ಯ ಅವರು ಭಾಗವಹಿಸುತ್ತಾರೆ.

ADVERTISEMENT

ಚಲನಚಿತ್ರ ನಿರ್ಮಾಣ, ರಂಗಭೂಮಿ ಕಲೆಗಳು ಮತ್ತು ಭಾರತೀಯ ನಾಗರಿಕ ಸೇವೆಗಳ ಕುರಿತು ಚರ್ಚೆಗಳು ನಡೆಯಲಿದ್ದು, ಸಿನಿಮಾ ನಿರ್ದೇಶಕ ಟಿ.ಎಸ್. ನಾಗಾಭರಣ, ರಂಗಭೂಮಿ ಕಲಾವಿದೆ ಸುಷ್ಮಾ ಹಾಗೂ ಇನ್‌ಸೈಟ್ಸ್ ಐಎಎಸ್ ಅಕಾಡೆಮಿಯ ವಿನಯ್ ಅವರು ಪಾಲ್ಗೊಳ್ಳಲಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಾಗೂ ಅಂತಃಶಕ್ತಿಯ ಬಲವರ್ಧನೆಗಾಗಿ ಉತ್ತಮ ಮಾರ್ಗದರ್ಶನ ಒದಗಿಸುವುದು ಈ ಶೈಕ್ಷಣಿಕ ಮೇಳದ ಉದ್ದೇಶವಾಗಿದೆ. 50ಕ್ಕೂ ಹೆಚ್ಚು ಅಗ್ರಗಣ್ಯ ಶೈಕ್ಷಣಿಕ ಸಂಸ್ಥೆಗಳು ಈ ಮೇಳದಲ್ಲಿ ಭಾಗಿಯಾಗಲಿದ್ದು, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸ್‌ಗಳು, ಅವಕಾಶಗಳ ಬಗ್ಗೆ ಮಾಹಿತಿ ಸಿಗಲಿದೆ.

ಶಿಕ್ಷಣ ಸಾಲ ಯೋಜನೆಯ ಜತೆಗೆ ವಿಶೇಷ ಕೋರ್ಸ್‌ಗಳ ಮಾಹಿತಿಯೂ ದೊರೆಯಲಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಕಾಲೇಜುಗಳ ಮಳಿಗೆಗಳು ಮೇಳದಲ್ಲಿ ಇರಲಿವೆ. ಕಾಲೇಜಿನಲ್ಲಿನ ಕೋರ್ಸ್‌ಗಳ ಮಾಹಿತಿ, ಶುಲ್ಕ ವಿವರ, ಕೋರ್ಸ್‌ ಅಧ್ಯಯನದಿಂದ ಭವಿಷ್ಯದಲ್ಲಿ ಸಿಗುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ದೊರೆಯುತ್ತದೆ.

ದಿನವಿಡೀ ಅಚ್ಚರಿ ಉಡುಗೊರೆ ಪಡೆಯುವ ಅವಕಾಶ ಇರಲಿದೆ. ಎರಡನೇ ದಿನದಂದು ಬಂಪರ್ ಲಕ್ಕಿ ಡ್ರಾ ಘೋಷಿಸಲಾಗುತ್ತದೆ. ನೀಟ್ ಮತ್ತು ಸಿಇಟಿ ಅಣಕು ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಟಾಪರ್ಸ್‌ಗಳಿಗೆ ಒಟ್ಟು ₹ 2 ಲಕ್ಷ ನಗದು ಗೆಲ್ಲುವ ಅವಕಾಶ ಇರಲಿದೆ. ಅಣಕು ‘ನೀಟ್‌’ ಮತ್ತು ‘ಸಿಇಟಿ’ನಲ್ಲಿ ಮೊದಲ ಸ್ಥಾನ ಪಡೆದವರಿಗೆ ತಲಾ ₹25 ಸಾವಿರ, ಎರಡನೇ ಸ್ಥಾನ ಪಡೆದವರಿಗೆ ತಲಾ ₹15 ಸಾವಿರ, ಮೂರನೇ ಸ್ಥಾನ ಪಡೆದವರಿಗೆ ತಲಾ ₹10 ಸಾವಿರ ಬಹುಮಾನ ನೀಡಲಾಗುವುದು. ಜತೆಗೆ, ಅಧಿಕ ಅಂಕಗಳಿಸಿದ 25 ವಿದ್ಯಾರ್ಥಿಗಳಿಗೆ
ತಲಾ ₹2 ಸಾವಿರ ನೀಡಲಾಗುವುದು.

ಆನ್‌ಲೈನ್‌ನಲ್ಲಿ ನೋಂದಣಿ ಪ್ರಾರಂಭವಾಗಿದ್ದು, ಆಸಕ್ತರು www.eduverse.in ಮೂಲಕ ಅಥವಾ ಮೊ. ಸಂಖ್ಯೆ 9845816919, 9743307037ಕ್ಕೆ ಕರೆ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.