ADVERTISEMENT

ಶಾಲೆಗೆ ಬಾಂಬ್‌ ಬೆದರಿಕೆ ಇ–ಮೇಲ್‌: ಪೊಲೀಸರಿಂದ ತಪಾಸಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 14:31 IST
Last Updated 22 ಜುಲೈ 2025, 14:31 IST
<div class="paragraphs"><p>ಬಾಂಬ್ ಬೆದರಿಕೆ</p></div>

ಬಾಂಬ್ ಬೆದರಿಕೆ

   

ಬೆಂಗಳೂರು: ನಗರದ ಶಿಕ್ಷಣ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆಯ ಇ–ಮೇಲ್‌ ಬರುವುದು ಮುಂದುವರಿದಿದ್ದು, ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕ್ರಿಸಲಿಸ್ ಹೈ ಶಾಲೆಗೆ ಮಂಗಳವಾರ ಬೆಳಿಗ್ಗೆ ಬಾಂಬ್‌ ಬೆದರಿಕೆ ಇ–ಮೇಲ್‌ ಬಂದಿತ್ತು. ಇದರಿಂದ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮಂಗಳವಾರ ಬೆಳಿಗ್ಗೆಯೂ ಎಂದಿನಂತೆಯೇ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಸಿಬ್ಬಂದಿ ಇ–ಮೇಲ್ ಪರಿಶೀಲನೆ ನಡೆಸಿದಾಗ ಬಾಂಬ್‌ ಬೆದರಿಕೆ ಇ–ಮೇಲ್‌ ಬಂದಿದ್ದು ಗೊತ್ತಾಗಿತ್ತು. ಅದನ್ನು ಗಮನಿಸಿದ ಸಿಬ್ಬಂದಿ, ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದರು. ಪ್ರಾಂಶುಪಾಲರು  ಪೊಲೀಸರಿಗೆ ತಿಳಿಸಿದ್ದರು. ವರ್ತೂರು ಠಾಣೆಯ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು.

ADVERTISEMENT

‘ಶಾಲಾ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಬಾಂಬ್‌ ನಿಷ್ಕ್ರಿಯ ದಳ, ಬಾಂಬ್‌ ತಪಾಸಣೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳಾಗಲಿ, ರಾಸಾಯನಿಕ ಪದಾರ್ಥಗಳಾಗಲಿ ಪತ್ತೆ ಆಗಿಲ್ಲ’ ಎಂದು ಪೊಲೀಸರು ಹೇಳಿದರು.

ಜುಲೈ 18ರಂದು ಆರ್​​.ಆರ್​.ನಗರ, ಕೆಂಗೇರಿಯ ಭಾಗದ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆಯಾ ಶಾಲೆಗಳಿಗೆ ಭೇಟಿ ನೀಡಿದ್ದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದ್ದರು. ಯಾವುದೇ ಸ್ಫೋಟಕ ವಸ್ತು ಪತ್ತೆ ಆಗಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.