ADVERTISEMENT

ಕೈದಿಗಳ ಸಂದರ್ಶನ ನೋಡಿ ಬಾಂಬ್‌ ಬೆದರಿಕೆ !

ಎಂಸಿಎ ಪದವೀಧರ ಬಂಧನ * ಹಣ ಸಂಪಾದಿಸಲು ಆರೋಪಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 21:40 IST
Last Updated 11 ನವೆಂಬರ್ 2019, 21:40 IST
ದೇವೇಂದ್ರಕುಮಾರ್
ದೇವೇಂದ್ರಕುಮಾರ್   

ಬೆಂಗಳೂರು: ತೆಲುಗು ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕೈದಿಗಳ ಸಂದರ್ಶನ ನೋಡಿ ಪ್ರೇರಿತಗೊಂಡು ಹಣಕ್ಕಾಗಿ ಶ್ರೀಮಂತರ ಮನೆಗಳಿಗೆ ಬಾಂಬ್‌ ಬೆದರಿಕೆ ಹಾಕುತ್ತಿದ್ದ ಆರೋಪದಡಿ ದೇವೇಂದ್ರಕುಮಾರ್‌ (24) ಎಂಬಾತನನ್ನು ಎಚ್‌ಎಸ್‌ಆರ್‌ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ಚಿತ್ತೂರಿನ ದೇವೇಂದ್ರಕುಮಾರ್, ಎಂಸಿಎ ಪದವೀಧರ. ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆತ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ವರ್ಷದ ಹಿಂದಷ್ಟೇ ಕೆಲಸ ಬಿಟ್ಟಿದ್ದ. ಓಲಾ ಕಂಪನಿಗೆ ಕ್ಯಾಬ್‌ ಅಟ್ಯಾಚ್‌ ಮಾಡಿ ಅದರಿಂದ ಬಂದ ಕಮಿಷನ್ ಹಣದಲ್ಲಿ ಜೀವನ ನಡೆಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಟೆಕಿ ಮನೆಗೆ ಬೆದರಿಕೆ ಪತ್ರ: ‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಸಾಫ್ಟ್‌ವೇರ್ ಎಂಜಿನಿಯರೊಬ್ಬರ ಮನೆಗೆ ಇತ್ತೀಚೆಗಷ್ಟೇ ಬಾಂಬ್ ಬೆದರಿಕೆ ಪತ್ರ ಬಂದಿತ್ತು. ಅಂಥದ್ದೇ ಪತ್ರ ಇನ್ನೆರಡು ಮನೆಗಳಿಗೂ ಬಂದಿತ್ತು.

ADVERTISEMENT

‘ನಿಮ್ಮ ಮನೆಯಲ್ಲಿ ಬಾಂಬ್‌ ಇಟ್ಟಿದ್ದೇನೆ. ನಾನು ಕೇಳಿದಷ್ಟು ಹಣ ಕೊಡಬೇಕು. ಅವಾಗಲೇ ಬಾಂಬ್‌ ನಿಷ್ಕ್ರಿಯಗೊಳಿಸುತ್ತೇನೆ. ಇಲ್ಲದಿದ್ದರೆ, ಆ ಬಾಂಬ್ ಸ್ಫೋಟ ಮಾಡುತ್ತೇನೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಇ– ಮೇಲ್‌ ವಿಳಾಸವನ್ನು ಮಾತ್ರ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪತ್ರದಿಂದ ಆತಂಕಗೊಂಡ ಮನೆ ಮಾಲೀಕರು ಠಾಣೆಗೆ ದೂರು ನೀಡಿದ್ದರು. ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದಳದೊಂದಿಗೆ ಮನೆಗಳಿಗೆ ಹೋಗಿ ಪೊಲೀಸರು ತಪಾಸಣೆ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪತ್ರದಲ್ಲಿದ್ದ ಇ–ಮೇಲ್ ಜಾಡು ಹಿಡಿದು ತನಿಖೆ ಮುಂದುವರಿಸಿದ ಪೊಲೀಸರು, ದೇವೇಂದ್ರಕುಮಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅವರು ತಿಳಿಸಿದರು.

ಹಣ ಗಳಿಸಲು ಕೃತ್ಯ: ‘ಕೆಲಸ ಬಿಟ್ಟ ನಂತರ ಆರೋಪಿಗೆ ಹಣದ ಕೊರತೆ ಉಂಟಾಗಿತ್ತು. ಓಲಾ ಕ್ಯಾಬ್‌ನಿಂದಲೂ ಹೆಚ್ಚಿನ ಕಮಿಷನ್ ಬರುತ್ತಿರಲಿಲ್ಲ. ಊಟಕ್ಕೂ ಆರೋಪಿ ಕಷ್ಟಪಡುತ್ತಿದ್ದ. ಹೀಗಾಗಿ ಬಾಂಬ್‌ ಬೆದರಿಕೆ ಪತ್ರದ ಸಂಚು ರೂಪಿಸಿದ್ದ’ ಎಂದು ಅಧಿಕಾರಿ ಹೇಳಿದರು.

‘ಆಂಧ್ರಪ್ರದೇಶದ ವಿವಿಧ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಕೈದಿಗಳನ್ನು ಸ್ಥಳೀಯ ವಾಹಿನಿಯೊಂದು ಸಂದರ್ಶನ ಮಾಡುತ್ತಿದೆ. ಅದರ ವಿಡಿಯೊಗಳನ್ನು ಯೂಟ್ಯೂಬ್, ಫೇಸ್‌ಬುಕ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಆ ವಿಡಿಯೊಗಳನ್ನು ಆರೋಪಿ ನಿತ್ಯವೂ ನೋಡುತ್ತಿದ್ದ’ ಎಂದು ಅವರು ತಿಳಿಸಿದರು.

‘ಶ್ರೀಮಂತರ ಮನೆಗಳಿಗೆ ಬಾಂಬ್‌ ಬೆದರಿಕೆ ಪತ್ರ ಕಳುಹಿಸುತ್ತಿದ್ದೆವು. ಅವರೇ ಮನೆಗೆ ಕರೆದು ಹಣ ಕೊಟ್ಟು ಕಳುಹಿಸುತ್ತಿದ್ದರು. ‍ಪೊಲೀಸರಿಗೂ ಮಾಹಿತಿ ನೀಡುತ್ತಿರಲಿಲ್ಲ ಎಂಬುದಾಗಿ ಕೈದಿಯೊಬ್ಬ ಸಂದರ್ಶನದಲ್ಲಿ ಹೇಳಿದ್ದ. ಅದೇ ಮಾತಿನಿಂದ ಪ್ರೇರಿತಗೊಂಡ ಆರೋಪಿ, ಬೆಂಗಳೂರಿನಲ್ಲೂ ಬಾಂಬ್ ಬೆದರಿಕೆ ಪತ್ರ ಕಳುಹಿಸಿ ಹಣ ಸಂಪಾದಿಸಲು ಮುಂದಾಗಿದ್ದ. ಆರಂಭದಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ’ ಎಂದು ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.