ADVERTISEMENT

ಜಮೀನು ಕಬಳಿಕೆಗೆ ಬಾಂಬ್ ಬೆದರಿಕೆ ಪತ್ರ

* ನ್ಯಾಯಾಧೀಶರಿಗೆ ಬೆದರಿಕೆಯೊಡ್ಡಿದ್ದ ಪ್ರಕರಣ * ತುಮಕೂರಿನಲ್ಲಿ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 18:17 IST
Last Updated 20 ಅಕ್ಟೋಬರ್ 2020, 18:17 IST
ರಾಜಶೇಖರ್
ರಾಜಶೇಖರ್   

ಬೆಂಗಳೂರು: ‘ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರಿಗೆ ಜಾಮೀನು ನೀಡಬೇಕು. ಇಲ್ಲದಿದ್ದರೆ, ನಿಮ್ಮ ಕಾರಿನ ಇಂಜಿನ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸುತ್ತೇನೆ’ ಎಂದು ಬೆದರಿಕೆಯೊಡ್ಡಿ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಆರೋಪದಡಿ ರಾಜಶೇಖರ್‌ ಎಂಬಾತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಜಿಲ್ಲೆಯ ತಿಪಟೂರಿನ ಲಿಂಗದಹಳ್ಳಿಯ ರಾಜಶೇಖರ್, ಸಂಬಂಧಿಯೇ ಆದ ರಮೇಶ್ ಹಾಗೂ ಆತನ ತಮ್ಮನ ಹೆಸರಿನಲ್ಲಿ ನ್ಯಾಯಾಧೀಶರಿಗೆ ಪತ್ರ ಕಳುಹಿಸಿದ್ದ. ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರಾಜಶೇಖರ್ ಸಿಕ್ಕಿಬಿದ್ದ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದರು.

‘33ನೇ ಸಿಸಿಎಚ್ ನ್ಯಾಯಾಧೀಶರ ಹೆಸರಿಗೆ ಸೋಮವಾರ ಸಂಜೆ ಪಾರ್ಸೆಲ್ ಬಂದಿತ್ತು. ಬೆದರಿಕೆ ಪತ್ರ ಹಾಗೂ ಡಿಟೋನೇಟರ್ ಮಾದರಿ ವಸ್ತು ಪಾರ್ಸೆಲ್‌ನಲ್ಲಿತ್ತು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದೂ ಹೇಳಿದರು.

ADVERTISEMENT

ಗುರುತಿನ ಚೀಟಿ ಜಾಡು: ‘ಗುಬ್ಬಿ ತಾಲ್ಲೂಕಿನ ಚೇಳೂರಿನ ರಮೇಶ್ ಎಂಬುವರ ಹೆಸರಿನ ಗುರುತಿನ ಚೀಟಿ ಪತ್ರದಲ್ಲಿತ್ತು. ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದ ವಿಶೇಷ ತಂಡ, ರಾತ್ರಿಯೇ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು’ ಎಂದು ಅನುಚೇತ್ ವಿವರಿಸಿದರು.

‘ತಮಗೂ ಪತ್ರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದ ರಮೇಶ್, ತಮ್ಮ ವಿರುದ್ಧ ಕೌಟುಂಬಿಕ ಹಾಗೂ ವೈಯಕ್ತಿಕ ದ್ವೇಷ ಸಾಧಿಸುತ್ತಿರುವ ರಾಜಶೇಖರ್ ಕೃತ್ಯ ಎಸಗಿರಬಹುದೆಂದು ಅನುಮಾನಪಟ್ಟಿದ್ದರು. ನಂತರವೇ ವಿಶೇಷ ತಂಡ, ರಾಜಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.

‍ಪತ್ನಿ ತಂಗಿ ಮೇಲೂ ಕಣ್ಣು ಹಾಕಿದ್ದ: ‘4ನೇ ತರಗತಿವರೆಗೆ ಓದಿದ್ದ ರಾಜಶೇಖರ್, ಗುಬ್ಬಿ ತಾಲ್ಲೂಕಿನ ಹಾಗಲವಾಡಿಯ ಯುವತಿಯನ್ನು ಮದುವೆಯಾಗಿದ್ದ. ಆಕೆಗೆ ತಂಗಿ ಇದ್ದಾರೆ. ಅಕ್ಕ– ತಂಗಿ ಹಾಗೂ ಅವರ ತಂದೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಇತ್ತು. ಅದನ್ನು ಕಬಳಿಸಲು ಸಂಚು ರೂಪಿಸಿದ್ದ ರಾಜಶೇಖರ್, ಪತ್ನಿಯ ತಂಗಿಯನ್ನೇ ಮದುವೆಯಾಗಲು ಪ್ರಯತ್ನಿಸಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ತಂಗಿಯನ್ನು ರಮೇಶ್‌ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ನಂತರ, ತಂಗಿಯ ಆಸ್ತಿ ಪಾಲು ರಮೇಶ್‌ ಅವರಿಗೆ ಹೋಗಿತ್ತು. ಆರೋಪಿ ರಾಜಶೇಖರ್, ರಮೇಶ್ ಜೊತೆ ಜಗಳ ತೆಗೆಯಲಾರಂಭಿಸಿದ್ದ. ಅವರನ್ನು ಜೈಲಿಗೆ ಕಳುಹಿಸಿದರೆ, ಎಲ್ಲ ಆಸ್ತಿ ತನಗೆ ಬರುತ್ತದೆಂದು ತಿಳಿದು ಈ ಕೃತ್ಯ ಎಸಗಿದ್ದ’ ಎಂದು ಪೊಲೀಸರು ವಿವರಿಸಿದರು.

‘ರಾಜಶೇಖರ್ ಜೊತೆಯಲ್ಲಿ ಕೃತ್ಯಕ್ಕೆ ಸಹಕರಿಸಿದ್ದ ಒಬ್ಬನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.