ಸದಾಶಿವನಗರದಲ್ಲಿ ನೀವ್ ಶಾಲೆಯ ಮಕ್ಕಳನ್ನು ಹೊರಗೆ ಕಳುಹಿಸಲಾಯಿತು
ಪ್ರಜಾವಾಣಿ ಚಿತ್ರ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ 15ಕ್ಕೂ ಹೆಚ್ಚು ಶಾಲೆಗಳಿಗೆ ಮುಜಾಹಿದ್ದಿನ್ ಹೆಸರಿನಲ್ಲಿ ಇ– ಮೇಲ್ ಬಂದಿದೆ. ಕೆಲವು ಅಂತರರಾಷ್ಟ್ರೀಯ ವಿಚಾರ ಪ್ರಸ್ತಾಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಶಾಲೆಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದರು.
ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ, ಎಲ್ಲಾ ಸ್ಕ್ವಾಡ್ ಕಳುಹಿಸಿ ತಪಾಸಣೆ ನಡೆಸಬೇಕು. ಕಟ್ಟೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದ್ದಾರೆ.
ಬೆದರಿಕೆ ಬಂದಿರುವ 15 ಶಾಲೆಗಳಲ್ಲಿಯೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಕಳೆದ ವರ್ಷವು ಇದೇ ರೀತಿ ಕರೆ ಬಂದಿತ್ತು ಎನ್ನಲಾಗುತ್ತಿದೆ. ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಗಂಭೀರವಾಗಿ ಪರಿಗಣಿಸಲಾಗಿದೆ. ಬಾಂಬ್ ಬೆದರಿಕೆಯ ಇಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಾಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮಕ್ಕಳು ಆತಂಕಪಡುವುದು ಬೇಡ ಎಂದು ಸಚಿವ ಪರಮೇಶ್ವರ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.