ಡಿಕೆಶಿ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಚೇರಿ ಹಾಗೂ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಕಿಡಿಗೇಡಿಯೊಬ್ಬ ಇ–ಮೇಲ್ ಸಂದೇಶ ಕಳುಹಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ಗೊತ್ತಾದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ಪರಿಶೀಲಿಸಿದರು.
‘ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪರಿಚಿತ ಇ–ಮೇಲ್‌ನಿಂದ ಟರ್ಮಿನಲ್ ವ್ಯವಸ್ಥಾಪಕರ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿತ್ತು. ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ನಲ್ಲಿ ನಾಲ್ಕು ಕಚ್ಚಾಬಾಂಬ್‌ಗಳನ್ನು (ಐಇಡಿ) ಇಡಲಾಗಿದೆ. ಅದು ಸ್ಫೋಟಗೊಳ್ಳಲಿವೆ. ಇದಾದ ಎರಡು ಗಂಟೆಯ ಬಳಿಕ ಶಿವಕುಮಾರ್ ಅವರ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುತ್ತೇನೆ ಎಂಬುದಾಗಿ ಇ– ಮೇಲ್‌ನಲ್ಲಿ ಬರೆಯಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಡಿಸಿಎಂ ಮನೆ, ಕಚೇರಿ ಮತ್ತು ವಿಮಾನ ನಿಲ್ದಾಣದ ಪ್ರತಿ ಸ್ಥಳವನ್ನು ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
‘ದುಷ್ಕರ್ಮಿ ಎರಡು ನಕಲಿ ಇ-ಮೇಲ್ ಖಾತೆಗಳನ್ನು ಸೃಷ್ಟಿಸಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಒಂದು ಖಾತೆಯನ್ನು ಚಿತ್ರ ನಟಿಯೊಬ್ಬರ ಹೆಸರಿನಲ್ಲಿ ಸೃಷ್ಟಿಸಿದ್ದು ಮತ್ತೊಂದು ಖಾತೆ ರಾಜಕಾರಣಿಯೊಬ್ಬರ ಹೆಸರಿನಲ್ಲಿ ಸೃಷ್ಟಿಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.