ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ಕ್ಕೆ ಇದೇ ಶುಕ್ರವಾರ (ಆ.8) ಚಾಲನೆ ಸಿಗಲಿದೆ.
ಮೂರೂ ದಿನ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯ ಗೋಷ್ಠಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 400ಕ್ಕೂ ಹೆಚ್ಚು ಸಾಹಿತಿಗಳು ಹಾಗೂ ಕಲಾವಿದರು ಭಾಗಿಯಾಗಲಿದ್ದಾರೆ. ಈ ವರ್ಷ ಇದಕ್ಕಾಗಿ ಎಂಟು ವಿವಿಧ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ.
ದಕ್ಷಿಣ ಭಾರತದ ನಾಲ್ಕು ಭಾಷೆಗಳು ಮತ್ತು ಇಂಗ್ಲಿಷ್ ಒಳಗೊಂಡು ಒಟ್ಟು ಐದು ಭಾಷೆಗಳಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮರಾಠಿ ಆಹ್ವಾನಿತ ಭಾಷೆಯಾಗಿದ್ದು, ಆ ಭಾಷೆಯಲ್ಲಿಯೂ ವಿಚಾರ ಗೋಷ್ಠಿಗಳು ನಡೆಯಲಿವೆ. ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ಲೇಖಕರ ಜತೆಗೆ ಸಂವಾದಗಳು ನಡೆಯಲಿವೆ. ಮುಖ್ಯ ವೇದಿಕೆಯಲ್ಲಿ ಸಾಹಿತ್ಯ ಉತ್ಸವದ ಎಲ್ಲ ಪ್ರಮುಖ ಗೋಷ್ಠಿಗಳು ಮತ್ತು ಎಂಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರಮುಖರು ಭಾಗಿ: ಸಾಹಿತ್ಯೋತ್ಸವದಲ್ಲಿ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿಯರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ದಾಮೋದರ ಮೌಜೊ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ ಅವರ ಜತೆಗೆ ಸಾಹಿತ್ಯ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳುತ್ತಾರೆ. ಲಕ್ಷ್ಮೀ ಚಂದ್ರಶೇಖರ್, ಬಿ.ಜಯಶ್ರೀ, ಪ್ರವೀಣ್ ಗೋಡ್ಖಿಂಡಿ, ಮಾನಸಿ ಪ್ರಸಾದ್, ಟಿ.ಎಂ. ಕೃಷ್ಣ, ಗಣಪತಿ ಭಟ್ ಹಾಸಣಗಿ, ಬಿ-ಸ್ಟುಡಿಯೊ ಮತ್ತು ಬೆಂಗಳೂರು ಕ್ಲಬ್ ಆಫ್ ಕಥಕ್ಕಳಿ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇಶದ 36 ಪ್ರಮುಖ ಸಾಹಿತಿಗಳು ಪ್ರತ್ಯೇಕವಾಗಿ ತಮ್ಮ ಓದುಗರು ಮತ್ತು ಸಾಹಿತ್ಯಾಭಿಮಾನಿಗಳ ಜತೆಗೆ ಈ ಬಾರಿ ಮುಖಾಮುಖಿಯಾಗಲಿದ್ದಾರೆ. ಇದು ಸಾಹಿತಿ ಮತ್ತು ಓದುಗರ ನಡುವೆ ನಡೆಯಲಿರುವ ನೇರ ಮಾತುಕತೆಯ ಅಂಗಳವಾಗಿದೆ. ‘ಅನಾವರಣ’ ವೇದಿಕೆಯಲ್ಲಿ ಕನ್ನಡ ಸೇರಿ ವಿವಿಧ ಭಾಷೆಗಳ 36 ಕೃತಿಗಳು ಬಿಡುಗಡೆಯಾಗಲಿವೆ. ಈ ವೇದಿಕೆಯಲ್ಲಿ ಕೃತಿಗಳ ಕುರಿತು ಮಾತುಕತೆಗಳೂ ನಡೆಯಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಎಂದು: ಇದೇ 8ರಿಂದ 10ರವರೆಗೆ
ಎಲ್ಲಿ: ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣ
ವೇದಿಕೆಗಳೆಷ್ಟು: ಎಂಟು ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ
ಚಿಣ್ಣರ ಲೋಕ ಪುಸ್ತಕ ಮಳಿಗೆ
ಮಕ್ಕಳಿಗಾಗಿ ಚಿಣ್ಣರ ಲೋಕ ವೇದಿಕೆ ಇರಲಿದೆ. ಇಲ್ಲಿಯೂ ವಿವಿಧ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ. ಪುಸ್ತಕ ಮಳಿಗೆಗಳು ಉತ್ಸವದ ಕೇಂದ್ರ ಬಿಂದುವಾಗಿದ್ದು ಕನ್ನಡ ಇಂಗ್ಲಿಷ್ ಮಲೆಯಾಳ ತೆಲುಗು ಮತ್ತು ತಮಿಳು ಭಾಷೆಯ ಕೃತಿಗಳು ಲಭ್ಯವಾಗಲಿವೆ ಎಂದು ಸಂಸ್ಥೆ ತಿಳಿಸಿದೆ. ಈ ಉತ್ಸವಕ್ಕೆ ಪ್ರವೇಶ ಉಚಿತವಿದ್ದು ಹೆಸರು ನೋಂದಣಿಗೆ: www.bookbrahmalitfest.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.