ADVERTISEMENT

‘ದಾಸ್ಯದಲ್ಲಿಯೇ ನಡೆಯುತ್ತಿದೆ ಜಾತಿ ಪದ್ಧತಿ’

ವಿಮರ್ಶಕ ಪಿ.ವಿ. ನಾರಾಯಣ ಬೇಸರ *ನೈಷಧಂ ಎಸ್ಸೆ ಅವರ ಎರಡು ಕೃತಿಗಳು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 16:31 IST
Last Updated 5 ಫೆಬ್ರುವರಿ 2023, 16:31 IST
ಕಾರ್ಯಕ್ರಮದಲ್ಲಿ ‘ಒಂದು ಯುಗಾಂತ’ ಮತ್ತು ‘ಜನ ಆಡಿಬಿಡುತ್ತಾರೆ’ ಪುಸ್ತಕಗಳನ್ನು ವಿಮರ್ಶಕ ಪಿ.ವಿ. ನಾರಾಯಣ (ಮಧ್ಯದಲ್ಲಿರುವರು) ಬಿಡುಗಡೆ ಮಾಡಿದರು. ಮಹಾಬಲಮೂರ್ತಿ ಕೊಡ್ಲಕೆರೆ ಹಾಗೂ ನೈಷಧಂ ಎಸ್ಸೆ ಇದ್ದಾರೆ. –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ‘ಒಂದು ಯುಗಾಂತ’ ಮತ್ತು ‘ಜನ ಆಡಿಬಿಡುತ್ತಾರೆ’ ಪುಸ್ತಕಗಳನ್ನು ವಿಮರ್ಶಕ ಪಿ.ವಿ. ನಾರಾಯಣ (ಮಧ್ಯದಲ್ಲಿರುವರು) ಬಿಡುಗಡೆ ಮಾಡಿದರು. ಮಹಾಬಲಮೂರ್ತಿ ಕೊಡ್ಲಕೆರೆ ಹಾಗೂ ನೈಷಧಂ ಎಸ್ಸೆ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶತಮಾನಗಳಿಂದಲೂ ದೇಶದಲ್ಲಿ ಜಾತಿ ಪದ್ಧತಿಯು ದಾಸ್ಯದಲ್ಲಿಯೇ ನಡೆಯುತ್ತಿದೆ. ಈ ವೇಳೆ ಸಮುದಾಯಗಳನ್ನು ಜಾಗೃತಗೊಳಿಸಿ, ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು’ ಎಂದು ವಿಮರ್ಶಕ ಪಿ.ವಿ. ನಾರಾಯಣ ತಿಳಿಸಿದರು.

ನೃತ್ಯ ಸಂಜೀವಿನಿ ಅಕಾಡೆಮಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೈಷಧಂ ಎಸ್ಸೆ (ಪ್ರೊ. ಅಶ್ವತ್ಥನಾರಾಯಣ ಶಾಸ್ತ್ರಿ) ಅವರ ‘ಒಂದು ಯುಗಾಂತ’ ಕಾದಂಬರಿ ಮತ್ತು ‘ಜನ ಆಡಿಬಿಡುತ್ತಾರೆ’ ಚೀನೀ ಕಾವ್ಯದ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ನಮ್ಮನ್ನು ದಾಸ್ಯಕ್ಕೆ ತಳ್ಳಿದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಗಾಂಧೀಜಿ ಅವರ ಕಾಲವನ್ನು ನೋಡಿ, ಪ್ರಸ್ತುತ ಜಗತ್ತು ಬದಲಾಗಬೇಕಿದೆ ಎನ್ನುತ್ತಿದ್ದೇವೆ. ಆದರೆ, ಪ್ರಾಚೀನ ಕಾಲದಿಂದಲೂ ಇರುವ ಜಾತಿ ಸಂಘರ್ಷವನ್ನು ಪ್ರಶ್ನಿಸುತ್ತಿಲ್ಲ. ನಮ್ಮ ಬದುಕು ಜಟಿಲ ಮತ್ತು ಭಿನ್ನವಾದದ್ದಾಗಿದೆ’ ಎಂದು ಹೇಳಿದರು.

‘ಜನ ಆಡಿಬಿಡುತ್ತಾರೆ’ ಎಂಬ ಪುಸ್ತಕ ಬಗ್ಗೆ ಮಾತನಾಡಿದ ಕವಿ ಮಹಾಬಲಮೂರ್ತಿ ಕೂಡ್ಲಕೆರೆ, ‘ಜಾಗತಿಕರಣದಿಂದ ಜಗತ್ತು ಹಣಕಾಸಿನ ವಿಚಾರಕ್ಕೆ ಸಣ್ಣದಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಸಿದ್ಧವಾಗಿರುವ ವಿಚಾರವನ್ನು ತಿಳಿದು, ಒಂದಷ್ಟು ಅಭಿಪ್ರಾಯಗಳನ್ನು ಹರಿಬಿಡಲಾಗುತ್ತಿದೆ. ಸಭ್ಯರ ಆಟವೆಂದು ಕರೆಸಿಕೊಂಡಿದ್ದ ಕ್ರಿಕೆಟ್‌ ಕೂಡ ಭ್ರಷ್ಟಾಚಾರದ ಕೊಂಡಿಯಾಗಿದೆ. ಈ ವೇಳೆ ಅತ್ಯ ಅಸತ್ಯ ಯಾವುದೆಂದು ತಿಳಿಯುವುದು ಕಷ್ಟ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಚೀನಾದ ಉತ್ತಮ ಕವಿತೆಗಳನ್ನು ನೈಷಧಂ ಅವರು ಕನ್ನಡಕ್ಕೆ ತಂದಿದ್ದಾರೆ. 1953ರಲ್ಲಿ ಚೀನಿ ಕವಿತೆಗಳನ್ನು ಬ್ರಿಟಿಷ್ ಕವಿಯೊಬ್ಬರು ಇಂಗ್ಲಿಷ್‌ಗೆ ತರ್ಜುಮೆ ಮಾಡಿದಾಗ ಹೇಳಿದ್ದ ಮಾತನ್ನು ಇವರು ಕೂಡ ಹೇಳಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೈಷಧಂ ಎಸ್ಸೆ, ‘ಹಿಂದಿನ ಸಂಸ್ಕೃತಿ ಮೌಲ್ಯಗಳು ಹೇಗಿತ್ತು ಅನ್ನುವುದಕ್ಕೆ ಕನ್ನಡಿ ನೀಡುವ ಪ್ರಯತ್ನ ಇದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.