ಬೆಂಗಳೂರು: ‘ಮಹಿಳೆಯು ಬರವಣಿಗೆಯ ಮೂಲಕ ತನ್ನ ಸಂಕೋಚವನ್ನು ಅಭಿವ್ಯಕ್ತಿಪಡಿಸಬೇಕೆಂದರೂ, ಅದನ್ನು ಬರೆಯಲಾಗದ ಪರಿಸ್ಥಿತಿಯಿದೆ. ಪ್ರಸ್ತುತ ಸಂದರ್ಭದಲ್ಲಿ ಇದು ಲೇಖಕಿಯರಿಗೆ ದೊಡ್ಡ ಸವಾಲಾಗಿದೆ’ ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ಬೇಸರ ವ್ಯಕ್ತಪಡಿಸಿದರು.
ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಂತಿ ಕೆ. ಅಪ್ಪಣ್ಣ ಅವರ ‘ಚಿತ್ರಕಾರನ ಬೆರಳು’ (ಕಥಾ ಸಂಕಲನ), ದೀಪಾ ಹಿರೇಗುತ್ತಿ ಅವರ ‘ಸರಹದ್ದು’ (ಕಥಾ ಸಂಕಲನ), ಕುಸುಮಾ ಆಯರಹಳ್ಳಿ ಅವರ ‘ಕಪಿಲೆ ಕಂಡ ಕತೆಗಳು’ ಪುಸ್ತಕಗಳನ್ನು ಜನಾರ್ಪಣೆ ಮಾಡಿ, ಮಾತನಾಡಿದರು.
‘ಲೇಖಕಿಯರು ಬರವಣಿಗೆಯ ಮೂಲಕ ಅನುಭವವನ್ನು ಕಟ್ಟಿಕೊಡುವ ಸಂಧರ್ಭದಲ್ಲಿ, ಎದುರಾಗುವ ಹೊಯ್ದಾಟ ಮತ್ತು ಸಂಕೋಚಗಳನ್ನು ಮೀರಿ ವಾಸ್ತವವನ್ನು ಅನಾವರಣ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.
‘ಜಗತ್ತು ಅನೇಕ ತಾತ್ವಿಕತೆಗಳನ್ನು ಕಂಡಿದೆ. ಅವುಗಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ ನಿವೃತ್ತಿ ಹೊಂದಿವೆ. ಇಂದು ಅಸಹಿಷ್ಣುತೆ, ಹಿಂಸೆ, ವಿಘಟನೆಗಳೇ ಬದುಕಿನ ಮೂಲ ಸಂಗತಿಗಳಾಗಿವೆ. ಹೀಗಿರುವಾಗ ಸರ್ವರನ್ನು ಒಳಗೊಳ್ಳುವ ಸ್ತ್ರೀವಾದ ಜಗತ್ತಿನ ಮುಂದಿರುವ ಅನಿವಾರ್ಯ ಆಯ್ಕೆಯಾಗಿದೆ. ಸ್ತ್ರೀವಾದವು ಗಂಡಿನ ಕಾರಣರಹಿತ ಅಹಂಕಾರ, ಕ್ರೌರ್ಯವನ್ನು ವಿರೋಧಿಸುತ್ತದೆಯೇ ಹೊರತು, ಗಂಡಸರನ್ನಲ್ಲ. ಗಂಡು ಮತ್ತು ಹೆಣ್ಣು ಪರಸ್ಪರ ಕೈಹಿಡಿದು ನಡೆಯಬೇಕಾದ ದಾರಿಯೇ ಸ್ತ್ರೀವಾದ’ ಎಂದು ಹೇಳಿದರು.
ಲೋಕಾರ್ಪಣೆಗೊಂಡ ಮೂರೂ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಹಿತಿ ವಸುಧೇಂದ್ರ, ‘ಈ ಕೃತಿಗಳು ಲೋಕದ ವಿಚಾರ, ಅಂಕು–ಡೊಂಕುಗಳು ಹಾಗೂ ಸಮಸ್ಯೆಗಳನ್ನು ತಿಳಿಸುವ ಹಾದಿಯಲ್ಲಿವೆ. ಹೀಗಾಗಿ, ಈ ಮೂರು ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಬಹು ಮುಖ್ಯವಾಗಿ ಕಾಣುತ್ತವೆ. ವಿಭಿನ್ನವಾದ ಕಥಾ ಹಂದರದೊಂದಿಗೆ ಸ್ತ್ರೀ ಕೇಂದ್ರಿತ ಬರವಣಿಗೆಯಲ್ಲೂ ಒಂದು ಹೆಜ್ಜೆ ಮುಂದೆ ಇಟ್ಟಂತ ಕಥೆಗಳು ಇಲ್ಲಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.