ADVERTISEMENT

ಗಮಕಕ್ಕೆ ದೊರೆಯದ ಪ್ರೋತ್ಸಾಹ: ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ

‘ಗದಾಯುದ್ಧಂ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 21:02 IST
Last Updated 7 ನವೆಂಬರ್ 2022, 21:02 IST
ನಗರದಲ್ಲಿ ಭಾನುವಾರ ‘ಗದಾಯುದ್ಧಂ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವೀರಲೋಕ ಪ್ರಕಾಶನದ ವ್ಯವಸ್ಥಾಪಕ ಆನಂದ್‌ ರಾಜ್, ಲೇಖಕ ಡಿ.ಎಸ್.ಶ್ರೀನಿವಾಸ್, ವ್ಯಾಖ್ಯಾನಕಾರ ಎ.ವಿ.ಪ್ರಸನ್ನ, ಲೇಖಕ ಎಂ.ಎ.ಜಯರಾಮರಾವ್, ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ ಹಾಜರಿದ್ದರು – ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ‘ಗದಾಯುದ್ಧಂ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವೀರಲೋಕ ಪ್ರಕಾಶನದ ವ್ಯವಸ್ಥಾಪಕ ಆನಂದ್‌ ರಾಜ್, ಲೇಖಕ ಡಿ.ಎಸ್.ಶ್ರೀನಿವಾಸ್, ವ್ಯಾಖ್ಯಾನಕಾರ ಎ.ವಿ.ಪ್ರಸನ್ನ, ಲೇಖಕ ಎಂ.ಎ.ಜಯರಾಮರಾವ್, ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ ಹಾಜರಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬರಹಗಾರರು ಬೆಳೆಯಲು ಪ್ರಕಾಶಕರ ಜತೆಗೆ ಕುಟುಂಬದ ಬೆಂಬಲ ಹಾಗೂ ಪ್ರೋತ್ಸಾಹವೂ ಮುಖ್ಯ’ ಎಂದು ವಿದ್ವಾಂಸ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಹೇಳಿದರು.

ವೀರಲೋಕ ಪುಸ್ತಕ ಪ್ರಕಾಶನವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಮಕ ವಿದ್ವಾಂಸ ಡಾ.ಎಂ.ಎ.ಜಯರಾಮರಾವ್ ಅವರ ‘ಗದಾಯುದ್ಧಂ– ಒಂದು ವ್ಯಾಖ್ಯಾನ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಲೇಖಕರಿಗೆ ಎಲ್ಲ ಕ್ಷೇತ್ರದ ಬೆಂಬಲ ಲಭಿಸಿದರೆ ಬೆಳೆಯಲು ಸಾಧ್ಯ. ನಾನು ಹಾಗೂ ಜಯರಾಮರಾವ್‌ ಅವರು ಜತೆಗೂಡಿ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದೇವೆ. ರನ್ನನ ಕಾವ್ಯ ಹಾಗೂ ಪದಗಳು ನಾನಾರ್ಥಗಳು ನೀಡುತ್ತವೆ’ ಎಂದು ಹೇಳಿದರು.

ADVERTISEMENT

ಲೇಖಕ ಡಾ.ಎಂ.ಎ.ಜಯರಾಮರಾವ್‌, ‘ರನ್ನ, ಜನ್ನ, ಪಂಪ ಹಾಗೂ ಕುಮಾರವ್ಯಾಸ ಅವರ ಕಾವ್ಯಗಳು ಇನ್ನೂ ಪ್ರಸ್ತುತದಲ್ಲಿವೆ. ಅದಕ್ಕೆ ಕಾರಣವಾದವರು ಗಮಕಿಗಳು. ಆದರೆ, ಸರ್ಕಾರ ಮತ್ತು ಅಕಾಡೆಮಿ ಗಮಕಕ್ಕೆ ಪ್ರಾಶಸ್ತ್ಯ ನೀಡದಿರುವುದು ನೋವು ತಂದಿದೆ’ ಎಂದರು.

ಲೇಖಕ ಶ್ರೀನಿವಾಸ ಮಾತನಾಡಿ, ಗದಾಯುದ್ಧಂ ಕೃತಿಯಲ್ಲಿ ರನ್ನನ ಶಬ್ದ ಭಂಡಾರವೇ ಇದೆ ಎಂದರು.

ವ್ಯಾಖ್ಯಾನಕಾರ ಡಾ.ಎ.ವಿ.ಪ್ರಸನ್ನ ಅವರು, ಪಂಪನ ಕಾವ್ಯದಲ್ಲಿನ ಕರ್ಣನ ವೈಭವೀಕರಣ, ರನ್ನನ ಕಾವ್ಯದ ದುರ್ಯೋಧನ ವೈಭವೀಕರಣ ಕುರಿತು ವಿಶ್ಲೇಷಿಸಿ, ಅಂದಿನ ಅವರ ರಾಜಾಶ್ರಯ ಹಾಗೂ ರಾಜಕಾರಣ ಇದಕ್ಕೆ ಕಾರಣವಿರಬಹುದೇ ಎಂದರು. ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಗಮಕಕಲಾ ಪರಿಷತ್ತಿನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ವಾಣಿಜ್ಯೋದ್ಯಮಿ ಎಂ.ವಿ.ಸತ್ಯನಾರಾಯಣ, ಬ್ರಾಹ್ಮಣ ವೆಲ್ ಫೇರ್ ಅಸೋಸಿ ಯೇಷನ್‌ನ ಅಧ್ಯಕ್ಷ ಡಾ.ಸತ್ಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.