ADVERTISEMENT

ಮಲೆಯಾಳ ಬದಲು ಕನ್ನಡ ಕೃತಿಗೆ ಬುಕರ್‌ ಪ್ರಶಸ್ತಿ ಬಂದಿದ್ದು ಹೇಗೆ: ಲೇಖಕರ ಜಿಜ್ಞಾಸೆ

ಬುಕ್‌ ಬ್ರಹ್ಮ ಸಾಹಿತೋತ್ಸವ 2025

ಉಮೇಶ್ ಭಟ್ಟ ಪಿ.ಎಚ್.
Published 9 ಆಗಸ್ಟ್ 2025, 14:51 IST
Last Updated 9 ಆಗಸ್ಟ್ 2025, 14:51 IST
ಬೆಂಗಳೂರಿನ ಸೆಂಟ್ಸ್ ಜಾನ್ಸ್ ಸಭಾಂಗಣದಲ್ಲಿ ಶುಕ್ರವಾರ  ಆರಂಭಗೊಂಡ ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ಬೂಕರ್‌ ಪ್ರಶಸ್ತಿಯಾಚೆ: ಭಾರತೀಯ ಕಥೆಗಳ ಭವಿಷ್ಯ ಕುರಿತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಸಂವಾದ ನಡೆಸಿದರು. ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಸೆಂಟ್ಸ್ ಜಾನ್ಸ್ ಸಭಾಂಗಣದಲ್ಲಿ ಶುಕ್ರವಾರ  ಆರಂಭಗೊಂಡ ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ಬೂಕರ್‌ ಪ್ರಶಸ್ತಿಯಾಚೆ: ಭಾರತೀಯ ಕಥೆಗಳ ಭವಿಷ್ಯ ಕುರಿತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಸಂವಾದ ನಡೆಸಿದರು. ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಲೇಖಕಿ ಡಾ.ಬಾನು ಮುಷ್ತಾಕ್‌ ಅವರ ಕೃತಿಗೆ ಬುಕರ್‌ ಪ್ರಶಸ್ತಿ ಬಂದಿದ್ದಾದರೂ ಹೇಗೆ, ಮಲೆಯಾಳ ಕೃತಿ ಬಿಟ್ಟು ಕನ್ನಡದ ಪುಸ್ತಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಮಾನ್ಯತೆ ಗಳಿಸಿತು, ಸಾಹಿತ್ಯಕ್ಕಿಂತ ಪ್ರಕಾಶಕರ ಪ್ರಭಾವ, ಮಾರುಕಟ್ಟೆ ಮೌಲ್ಯವೇ ಹೆಚ್ಚು ಶಕ್ತಿ ಶಾಲಿಯೇ. ಲೇಖಕರು ಪ್ರಶಸ್ತಿ ಪಡೆಯಲೆಂದೇ ಸಾಹಿತ್ಯ ರಚಿಸುತ್ತಾರೆಯೇ?

ಇಂತಹ ಚರ್ಚೆಗಳಿಗೆ ವೇದಿಕೆಯಾಗಿದ್ದು–ನಗರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಬುಕ್‌ ಬ್ರಹ್ಮ ಸಾಹಿತ್ಯ ಸಂಗಮದ ಮೊದಲ ಗೋಷ್ಠಿ. ‘ಎದೆಯ ಹಣತೆ’ ಕೃತಿಯ ಲೇಖಕಿ ಹಾಗೂ ಬುಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್‌, ಅನುವಾದಕಿ ದೀಪಾ ಭಾಸ್ತಿ, ಕಾನಿಷ್ಕ ಗುಪ್ತ, ಮೌತುಷಿ ಮುಖರ್ಜಿ ಅವರು ‘ಬುಕರ್ ಪ್ರಶಸ್ತಿಯಾಚೆ–ಯಾನದ ಹಿಂದೆ ಕಥೆಗಳು, ಭಾರತದ ಕಥೆಗಳ ಭವಿಷ್ಯ’ ಎನ್ನುವ ಕುರಿತು ಚರ್ಚೆಯಲ್ಲಿ ಭಾಗಿಯಾದರು. ಶ್ವೇತಾ ಎರಂ ಗೋಷ್ಠಿ ನಿರ್ವಹಿಸಿದರು.

‘ಎದೆಯ ಹಣತೆ’ಯನ್ನು ದೀಪಾ ಅವರಿಗೆ ನೀಡಿದಾಗ ಇದು ಅಂತರಾಷ್ಟ್ರೀಯ ಮಟ್ಟದ ಗಮನ ಸೆಳೆಯುತ್ತದೆ ಎಂದುಕೊಂಡಿರಲಿಲ್ಲ. ದೀರ್ಘ ಪಟ್ಟಿ ನಂತರ ಕಿರು ಪಟ್ಟಿಯಲ್ಲೂ ನಮ್ಮ ಕೃತಿ ಬಂದಾಗ ಆಶ್ಚರ್ಯವೂ ಆಯಿತು. ಅಂತಿಮವಾಗಿ ಪ್ರಶಸ್ತಿ ಪಡೆಯಿತು. ಸಾಹಿತ್ಯ ಪ್ರಮುಖವಾದರೂ ಕೃತಿ ಹಿಂದಿನ ಅಂಶಗಳು, ಪ್ರಕಾಶಕರ ಪ್ರಯತ್ನಗಳು ಕೂಡ ಪ್ರಶಸ್ತಿ ತರುವಲ್ಲಿ ಪ್ರೇರೇಪಿಸುತ್ತವೆ ಎಂದು ಬಾನು ಮುಷ್ತಾಕ್ ಒಪ್ಪಿಕೊಂಡರು.
ಇದಕ್ಕೆ ದನಿಗೂಡಿಸಿದ ಲೇಖಕ ಕಾನಿಷ್ಕ ಗುಪ್ತ, ಪ್ರತಿ ಭಾಷೆಗೂ ತನ್ನದೇ ಆದ ಶಕ್ತಿ ಇದ್ದೇ ಇರುತ್ತದೆ. ವಿಶೇಷವಾಗಿ ಮಲೆಯಾಳದ ಹಲವು ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಳ್ಳುತ್ತವೆ. ಇಂಗ್ಲಿಷ್‌ನಿಂದಲೂ ಮಲೆಯಾಳಗೆ ಅನುವಾದ ಮಾಡಲಾಗುತ್ತದೆ. ಭಾಷಾಂತರದ ಕಾರಣಕ್ಕೆ ಮಲೆಯಾಳ ಕೃತಿಗಳ ಓದುಗರು ವಿಶ್ವವ್ಯಾಪ್ತಿ ಇದ್ದಾರೆ. ಬ್ರಿಟನ್‌ನಲ್ಲಿನ ಪ್ರಕಾಶಕರು ಕೃತಿಗಳನ್ನು ಆಯ್ಕೆ ಮಾಡುಕೊಳ್ಳುವಾಗಲೇ ಕೃತಿಯ ಮಹತ್ವವನ್ನು ತಿಳಿದುಕೊಂಡೇ ಬಲ ತುಂಬುತ್ತಾರೆ. ಭಾರತೀಯ ಭಾಷೆಯಲ್ಲೂ ಬುಕರ್‌ನಷ್ಟೇ ಮಹತ್ವ ಇರುವ ಪ್ರಶಸ್ತಿಗಳು ಬೇಕು. ಇಂತಹ ಪ್ರಶಸ್ತಿಗಳು ಹೊಸ ಓದುಗರನ್ನು ಸೃಷ್ಟಿಸುತ್ತವೆ’ ಎಂದು ಇದರ ಹಿಂದಿರುವ ಅಂಶಗಳನ್ನು ವಿಶ್ಲೇಷಿಸಿದರು.

ADVERTISEMENT

ಅನುವಾದಕಿ ದೀಪಾ ಭಾಸ್ತಿ, ‘ಯಾವುದೇ ಪ್ರಶಸ್ತಿ ಬರುತ್ತದೆ ಎಂದು ಎದೆಯ ಹಣತೆ ಕೃತಿಯನ್ನು ಅನುವಾದ ಮಾಡಲಿಲ್ಲ. ಅಂತಹ ಉದ್ದೇಶವೂ ಇರಲಿಲ್ಲ. ಸತ್ವಯುತವಾದ ಕೃತಿಗೆ ಇಂಗ್ಲಿಷ್‌ ಮೂಲಕ ಶಕ್ತಿ ತುಂಬುವ ಕೆಲಸ ಆಯಿತು. ಎಲ್ಲವನ್ನೂ ಮೀರಿ ಪ್ರಶಸ್ತಿ ಕನ್ನಡಕ್ಕೆ ಬಂದಿತು’ ಎಂದು ಸಮರ್ಥಿಸಿಕೊಂಡರು.

ನಾಟಕ ವಹಿವಾಟು ವಾರ್ಷಿಕ ₹100 ಕೋಟಿ 

ಕರ್ನಾಟಕದಲ್ಲಿ ವೃತ್ತಿ ರಂಗಭೂಮಿ ಎಷ್ಟು ಪ್ರಬಲವಾಗಿ ಬೇರೂರಿದೆ ಎಂದರೆ ವಾರ್ಷಿಕ ₹100 ಕೋಟಿ ವಹಿವಾಟು ನಾಟಕಗಳ ಮೂಲಕ ನಡೆಯುತ್ತದೆ. ಅಂದರೆ ವರ್ಷಕ್ಕೆ 16 ಸಾವಿರದಿಂದ 18 ಸಾವಿರ ಹವ್ಯಾಸಿ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಸರ್ಕಾರ ವೃತ್ತಿ ರಂಗಭೂಮಿಯನ್ನು ಉತ್ತೇಜಿಸಬೇಕು ಎಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೊಳ ಹೇಳಿದರು.

ಏಣಗಿ ಬಾಳಪ್ಪ ಅವರ ಕುರಿತಾಗಿ ಗಣೇಶ ಅಮೀನಗಡ ರಚಿಸಿರುವ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯ 11ನೇ ಮುದ್ರಣದ ಪ್ರತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಈಗಲೂ ಹಳ್ಳಿಗಳಲ್ಲಿ ಜಾತ್ರೆ ಉತ್ಸವ ಸಂದರ್ಭದಲ್ಲಿ ನಾಟಕಗಳು ನಡೆಯುತ್ತವೆ. ಒಂದು ನಾಟಕಕ್ಕೆ ಕನಿಷ್ಠ ₹5 ಲಕ್ಷ ಖರ್ಚು ಮಾಡಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.