ADVERTISEMENT

ಉದ್ಯಾನದ ಹೊಂಡದಲ್ಲಿ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 16:56 IST
Last Updated 8 ಅಕ್ಟೋಬರ್ 2021, 16:56 IST
   

ಬೆಂಗಳೂರು: ಮಲ್ಲಸಂದ್ರದ ಉದ್ಯಾನದಲ್ಲಿರುವ ಹೊಂಡದಲ್ಲಿ ಬಿದ್ದು ಪ್ರತಾಪ್ (8) ಎಂಬಾತ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

‘ಸ್ಥಳೀಯ ನಿವಾಸಿ ಪ್ರತಾಪ್‌, ಸ್ನೇಹಿತರ ಜೊತೆ ಆಟವಾಡಲೆಂದು ಉದ್ಯಾನಕ್ಕೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಹೊಂಡದಿಂದ ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.

‘ಪ್ರತಾಪ್‌ನ ತಂದೆ– ತಾಯಿ, ಗಾರ್ಮೇಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಶುಕ್ರವಾರವೂ ಬೆಳಿಗ್ಗೆ ಅವರಿಬ್ಬರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬಾಲಕ ಮಾತ್ರ ಮನೆಯಲ್ಲಿದ್ದ.’

ADVERTISEMENT

‘ಮಧ್ಯಾಹ್ನ ಮನೆಯಿಂದ ಹೊರಬಂದಿದ್ದ ಬಾಲಕ, ಆಟವಾಡುತ್ತ ಉದ್ಯಾನಕ್ಕೆ ತೆರಳಿದ್ದ. ಆಟವಾಡುವಾಗ ಚಪ್ಪಲಿಯೊಂದು ಕಳಚಿ ಹೊಂಡದೊಳಗೆ ಬಿದ್ದಿತ್ತು. ತೇಲುತ್ತಿದ್ದ ಚಪ್ಪಲಿಯನ್ನು ತೆಗೆದುಕೊಳ್ಳಲು ಬಾಲಕ ಯತ್ನಿಸಿದ್ದ. ಇದೇ ಸಂದರ್ಭದಲ್ಲೇ ಕಾಲು ಜಾರಿ ಹೊಂಡದೊಳಗೆ ಬಿದ್ದಿದ್ದಾನೆ. ಹೊಂಡದಲ್ಲಿದ್ದ ನೀರಿನಲ್ಲಿ ಮುಳಗಿ ಆತ ಅಸುನೀಗಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ಮಳೆ ನೀರಿನಿಂದ ತುಂಬಿದ್ದ ಹೊಂಡ: ‘ಬಿಬಿಎಂಪಿ ಅಧೀನದ ಉದ್ಯಾನದಲ್ಲಿ ಹಲವು ವರ್ಷಗಳಿಂದ ಹೊಂಡವಿದೆ. ಸುತ್ತಲೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಹೊಂಡದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು’ ಎಂದೂ ಸ್ಥಳೀಯರೊಬ್ಬರು ಹೇಳಿದರು.

‘ಬಾಲಕನ ಸಾವಿಗೆ ಬಿಬಿಎಂಪಿ ಅಧಿಕಾರಿಗಳೇ ಹೊಣೆ. ಕೂಡಲೇ ಎಚ್ಚೆತ್ತು, ಹೊಂಡ ಬಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.

50 ಸಾವಿರ ಧನಸಹಾಯ: ಮಗುವಿನ ಪೋಷಕರಿಗೆ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್‌ ₹50 ಸಾವಿರ ಧನಸಹಾಯ ಮಾಡಿದರು. ಕುಟುಂಬಕ್ಕೆ ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.