ಬೆಂಗಳೂರು: ‘ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಬ್ರಹ್ಮಯಾನ’ ಪುಸ್ತಕವು ಕನ್ನಡ ಆಧ್ಯಾತ್ಮ ಸಾಹಿತ್ಯದ ಅಮೂಲ್ಯ ಕೃತಿ. ಇದು ಮಹಾಲಿಂಗರಂಗ ಕವಿಯ ಅನುಭವಾಮೃತ ಶಾಸ್ತ್ರ ಗ್ರಂಥ ಮಾತ್ರವಲ್ಲ, ಉತ್ತಮ ಕಾವ್ಯವೂ ಆಗಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ತಿಳಿಸಿದರು.
ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಉದಯ ಪ್ರಕಾಶನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
‘ಲೇಖಕರು ಮಹಾಲಿಂಗರಂಗನೊಂದಿಗೆ ಮುಖಾಮುಖಿಯಾಗಿ, ಆತನ ರೂಪಕ ಭಾಷೆಯಲ್ಲೇ ಅನುಕ್ತವಾದ ಆತ್ಮಾನುಸಂಧಾನದ ಪರಿಯನ್ನು ಸರಳವಾಗಿ ದಾಟಿಸುವ ಪ್ರಯತ್ನದಂತೆ ಈ ಕೃತಿ ರಚಿತವಾಗಿದೆ’ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ವಿದ್ವತ್ತು, ವಿನಯ ಹಾಗೂ ವಿವೇಕಗಳ ಆಕೃತಿಯೇ ಈ ಕೃತಿಯಲ್ಲಿ ಗರ್ಭೀಕರಿಸಿಕೊಂಡಿದೆ. ಈಗ ಜನರು ಲೌಕಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಲೌಕಿಕತೆ ಮತ್ತು ಆಧ್ಯಾತ್ಮವನ್ನು ಸಮನ್ವಯಿಕರಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಕೃತಿ ತಿಳಿಸುತ್ತದೆ. ಈ ಹಾದಿಯಲ್ಲಿ ಸಾಗುವುದೇ ಜನರ ಜೀವನ ಕ್ರಮವಾಗಬೇಕು’ ಎಂದು ಕಿವಿಮಾತು ಹೇಳಿದರು.
‘ಅಂತರಂಗದ ಪ್ರಪಂಚ ತೆರೆದುಕೊಳ್ಳುವುದೇ ಆಧ್ಯಾತ್ಮ. ಆಧ್ಯಾತ್ಮದೆಡೆಗೆ ಸಾಗಲು ಅಗತ್ಯವಿರುವ ಶುದ್ಧೀಕರಣ ಪ್ರಕ್ರಿಯೆಯನ್ನು ಬ್ರಹ್ಮಯಾನ ಕೃತಿ ತಿಳಿಸಿಕೊಡುತ್ತದೆ. ವ್ಯವಹಾರಿಕ ಪ್ರಪಂಚ ಮನುಷ್ಯನನ್ನು ಸದಾ ಆಕರ್ಷಿಸುತ್ತಿರುತ್ತದೆ. ಅದರಿಂದ ಆಚೆ ಬಂದು ಪಾರಮಾರ್ಥಿಕದೆಡೆ ಸಾಗುವ ದಾರಿಯ ಬಗ್ಗೆ ಕವಿ ಮಹಾಲಿಂಗರಂಗ ಅವರು11 ಅಧ್ಯಾಯಗಳಲ್ಲಿ ತಿಳಿಸಿದ್ದಾರೆ. ಅದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ’ ಎಂದು ಲೇಖಕ ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.
‘ಜಗತ್ತು, ಜೀವ ಮತ್ತು ಈಶ್ವರ, ಈ ಮೂರರ ನಡುವಣ ಸಂಬಂಧ ಎಂತಹದ್ದು. ಈ ಜೀವ ಜಗತ್ತಿನಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗುವುದು ಹೇಗೆ? ಇಂತಹ ಅನೇಕ ಸ್ವಾರಸ್ಯಗಳನ್ನು ಕೃತಿ ಒಳಗೊಂಡಿದೆ’ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅವರಿಗೆ ‘ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.