ADVERTISEMENT

Brand Bengaluru: 125 ಜಂಕ್ಷನ್‌ ಸಿಗ್ನಲ್‌ಗಳಲ್ಲಿ 'ಎಐ' ಕಣ್ಗಾವಲು

ಎಟಿಸಿಎಸ್‌ ಯಶಸ್ವಿ ಕಾರ್ಯ ನಿರ್ವಹಣೆ: ಪ್ರಮುಖ ಕಾರಿಡಾರ್‌ಗಳಲ್ಲಿ ತಗ್ಗಿದ ಸಂಚಾರ ದಟ್ಟಣೆ

ಕೆ.ಎಸ್ ಸುನಿಲ್
Published 24 ಫೆಬ್ರುವರಿ 2025, 21:13 IST
Last Updated 24 ಫೆಬ್ರುವರಿ 2025, 21:13 IST
<div class="paragraphs"><p>ನಗರದ ಹಡ್ಸನ್ ವೃತ್ತದಲ್ಲಿ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಅಳವಡಿಸುತ್ತಿರುವ ದೃಶ್ಯ ಸೋಮವಾರ ಕಂಡುಬಂತು   </p></div>

ನಗರದ ಹಡ್ಸನ್ ವೃತ್ತದಲ್ಲಿ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್‌ ಅಳವಡಿಸುತ್ತಿರುವ ದೃಶ್ಯ ಸೋಮವಾರ ಕಂಡುಬಂತು

   

ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್.ಜಿ.

ಬೆಂಗಳೂರು: ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ನಗರದ ಹಲವು ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕೃತಕ ಬುದ್ದಿಮತ್ತೆ (ಎ.ಐ) ಆಧಾರಿತ ವಾಹನಗಳ ದಟ್ಟಣೆ ಆಧರಿಸಿ ಸ್ವಯಂ ಚಾಲಿತ ಸಿಗ್ನಲ್‌ ನಿರ್ವಹಣೆ ವ್ಯವಸ್ಥೆಯ (ಅಡ್ಯಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌–ಎಟಿಸಿಎಸ್‌) ಪ್ರಾಯೋಗಿಕ ಅನುಷ್ಠಾನ ಯಶಸ್ವಿಯಾದ ಬೆನ್ನಲ್ಲೇ 125 ಜಂಕ್ಷನ್‌ಗಳಲ್ಲಿ ಎ.ಐ ಆಧಾರಿತ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. 

ADVERTISEMENT

ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಪ್ರಮುಖ ಕಾರಿಡಾರ್‌ಗಳಲ್ಲಿ ಸಂಚಾರ ದಟ್ಟಣೆ ತಗ್ಗಲಾರಂಭಿ ಸಿದೆ. ಎಐ ಆಧಾರಿತ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮಗಳ ಉಲ್ಲಂಘಿಸುವವರ ಪತ್ತೆ ಸುಲಭವಾಗುವುದರ ಜೊತೆಯಲ್ಲೇ ದಟ್ಟಣೆಯ ಮಾರ್ಗವನ್ನು ಗುರುತಿಸಿ ಸಿಗ್ನಲ್‌ ನೀಡುವುದಕ್ಕೂ ಅನುಕೂಲವಾಗಿದೆ. ಇದರಿಂದಾಗಿ ಸಂಚಾರ ವಿಭಾಗದ ಪೊಲೀಸರಿಗೆ ಸಂಚಾರ ದಟ್ಟಣೆ ನಿರ್ವಹಣೆಗೆ ಹೊಸ ಮಾರ್ಗ ತೆರೆದುಕೊಂಡಿದೆ.

ಎಟಿಸಿಎಸ್ ವ್ಯವಸ್ಥೆಯನ್ನು ಅಳವಡಿಸಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಸಿ–ಡಾಕ್‌ ಕಂಪನಿಗೆ ವಹಿಸಲಾಗಿದ್ದು, ಕಂಪನಿ ಅಧಿಕಾರಿಗಳು, ಸ್ಥಳೀಯ ಕಾರ್ಮಿಕರೊಂದಿಗೆ ನೂತನ ಸಿಗ್ನಲ್‌ಗಳನ್ನು ಅಳವಡಿಸುತ್ತಿದ್ದಾರೆ.

ಎಐ ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಎಟಿಸಿಎಸ್‌ ಹಸಿರು ನಿಶಾನೆ ತೋರುತ್ತದೆ. ಸಿಗ್ನಲ್‌ ಬಳಿಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆ ಆಧರಿಸಿ ಹಸಿರು ದೀಪ ಬೆಳಗಿಸಲಾಗುತ್ತದೆ.

‘ಬಸವನಗುಡಿ, ಜಯನಗರ, ಜೆ.ಪಿ.ನಗರ ಹಾಗೂ ಹಡ್ಸನ್‌ ವೃತ್ತದ ಸಿಗ್ನಲ್‌ಗಳಿಗೂ ಈ ತಂತ್ರಜ್ಞಾನ ಆಧಾರಿತ ಸಿಗ್ನಲ್‌ ಅಳವಡಿಸಲಾಗಿದೆ. ಹೊಸ ಸಿಗ್ನಲ್‌ ಅಳವಡಿಸಿದ ನಂತರ ಈ ಜಂಕ್ಷನ್‌ಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆ ಹಾಗೂ ತಂತ್ರಜ್ಞಾನ ಪರಿಣಾಮದ ಕುರಿತು ಅಧ್ಯಯನ ನಡೆಸಲಾಗಿದೆ. ಗಣನೀಯ ಸುಧಾರಣೆ ಕಂಡು ಬಂದಿದೆ. ಕೆ.ಆರ್.ರಸ್ತೆಯಂತಹ ಪ್ರಮುಖ ಕಾರಿಡಾರ್‌ನಲ್ಲೂ ಪ್ರಯಾಣದ ಸಮಯದಲ್ಲಿ ಬದಲಾವಣೆ ಆಗಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದರು.

ನಗರದಲ್ಲಿ ನಿತ್ಯ ಒಂದು ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿಯುತ್ತಿವೆ. ಈ ಮಧ್ಯೆ ನಿತ್ಯ ಸುಮಾರು ಒಂದೂವರೆಯಿಂದ ಎರಡು ಸಾವಿರ ದ್ವಿಚಕ್ರ ವಾಹನಗಳು ಹೊಸದಾಗಿ ನೋಂದಣಿ ಅಗುತ್ತಿವೆ. ಪರಿಣಾಮ ಪ್ರಮುಖ ಜಂಕ್ಷನ್, ವೃತ್ತ, ಮಾರುಕಟ್ಟೆಗಳು, ಜನನಿಬಿಡ ಸ್ಥಳಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸಂಚಾರ ನಿರ್ವಹಣೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರು ನಗರ ಸಂಚಾರ ದಟ್ಟಣೆ ನಗರಿಯಾಗಿ ಮಾರ್ಪಟ್ಟಿದೆ. ಹೊರ ವರ್ತುಲ ರಸ್ತೆಗಳು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ದಟ್ಟಣೆ ಸಾಮಾನ್ಯವಾಗಿದೆ. ನಿತ್ಯ ಕೆಲಸಕ್ಕೆ ಹೋಗುವ ಜನ ವಾಹನ ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಈ ಸಮಸ್ಯೆಗೆ ಪೊಲೀಸರು ಎಟಿಸಿಎಸ್‌ ಮೂಲಕ ತಕ್ಕಮಟ್ಟಿಗೆ ಪರಿಹಾರ ಕಂಡುಕೊಂಡಿದ್ದಾರೆ. ಎಟಿಸಿಎಸ್‌ ಬಳಕೆಯಿಂದಾಗಿ ಎಂಟು ಕಾರಿಡಾರ್‌ಗಳಲ್ಲಿ ಶೇಕಡ 16ರಿಂದ 61ರಷ್ಟು ಸಂಚಾರ ವೇಗ ಹೆಚ್ಚಳವಾಗಿದೆ. ಅಂಕಿಅಂಶಗಳ ಪ್ರಕಾರ, ಈ ಕಾರಿಡಾರ್‌ಗಳಲ್ಲಿ 3.5 ಕಿ.ಮೀ. ದೂರ ಸಂಚರಿಸಲು ತೆಗೆದುಕೊಳ್ಳುವ ಸಮಯ 17ರಿಂದ 14 ನಿಮಿಷಕ್ಕೆ ಇಳಿಕೆಯಾಗಿದೆ. ಗಂಟೆಗೆ ಸರಾಸರಿ ವೇಗ 12.5 ಕಿ.ಮೀ.ನಿಂದ 15 ಕಿ.ಮೀ.ಗೆ ಹೆಚ್ಚಳವಾಗಿದೆ.

‘ಬನ್ನೇರುಘಟ್ಟ ರಸ್ತೆಯ 5.9 ಕಿ.ಮೀ ಉದ್ದದ ಮಾರ್ಗದಲ್ಲಿ ಐದು ಜಂಕ್ಷನ್‌ಗಳಿವೆ. ಎಟಿಸಿಎಸ್ ಅಳವಡಿಕೆಗೂ ಮುನ್ನ ನಾಲ್ಕು ಚಕ್ರದ ವಾಹನಗಳು ಗಂಟೆಗೆ 17.9 ಕಿ.ಮೀ. ವೇಗದಲ್ಲಿ ಸಂಚರಿಸು ತ್ತಿದ್ದವು. ಹೊಸ ಸಿಗ್ನಲ್‌ ಅಳವಡಿಕೆ ಬಳಿಕ ವಾಹನಗಳ ವೇಗ ಗಂಟೆಗೆ 20.8 ಕಿ.ಮೀಗೆ ಹೆಚ್ಚಳವಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದರು.

‘ಐದು ಕಾರಿಡಾರ್‌ಗಳ 72 ಜಂಕ್ಷನ್‌ಗಳಲ್ಲಿ ವಿವಿಧ ಸಮಯಗಳಲ್ಲಿ ಜಿಪಿಎಸ್ ಅಳವಡಿಸಿರುವ ವಾಹನಗಳು ಸಾಗಿರುವುದನ್ನು ವಿಶ್ಲೇಷಿಸಿ ದತ್ತಾಂಶ ಸಿದ್ದಪಡಿಸಲಾಗಿದೆ. ಸಂಚಾರದ ಆರಂಭ, ಮುಕ್ತಾಯ, ತೆಗೆದುಕೊಂಡ ಸಮಯ, ವೇಗವನ್ನು ಪರಿಗಣಿಸಲಾಗಿದೆ’ ಎಂದು ಹೇಳಿದರು.

ನಗರದ ಜೆ.ಸಿ ರಸ್ತೆ ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್ ಟ್ರಾಫಿಕ್ ಸಿಗ್ನಲ್

‘ವಾಹನಗಳ ಸಂಚಾರ ಸಮಯ ಕಡಿಮೆ’

‘ಎಟಿಸಿಎಸ್ ತಂತ್ರಜ್ಞಾನ ಬಳಕೆಯಿಂದ ವಾಹನಗಳ ಸಂಚಾರ ಸಮಯ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ. ಪ್ರಾಯೋಗಿಕವಾಗಿ 41 ಕಡೆ ಅನುಷ್ಠಾನಗೊಳಿಸಲಾಗಿದ್ದ ಎಟಿಸಿಎಸ್‌ ಯೋಜನೆಯ ಮುಂದುವರೆದ ಭಾಗವಾಗಿ ನಗರದ 165 ಜಂಕ್ಷನ್‌ಗಳ ಪೈಕಿ 125 ಕಡೆ ನೂತನ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಸುಗಮ ಸಂಚಾರ ಮಾತ್ರವಲ್ಲದೆ ಪ್ರಯಾಣದ ಸಮಯ ಸಹ ಕಡಿಮೆಯಾಗುತ್ತಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ತಿಳಿಸಿದರು.

‘ಎಟಿಸಿಎಸ್‌ ಅಳವಡಿಸಿರುವ ಕಡೆಗಳಲ್ಲಿ ಶೇಕಡ 20ರಷ್ಟು ವಾಹನ ಸವಾರರ ಪ್ರಯಾಣದ ಅವಧಿ ಕಡಿಮೆಯಾಗಿದೆ. ಒಟ್ಟಾರೆ ಶೇಕಡ 15ಕ್ಕಿಂತ ಹೆಚ್ಚು ಸಂಚಾರ ದಟ್ಟಣೆ ತಗ್ಗಿದೆ. ಎರಡನೇ ಹಂತದಲ್ಲಿ ಉಳಿದ 235 ಜಂಕ್ಷನ್‌ಗಳಲ್ಲಿ ಎಐ ಆಧಾರಿತ ಸಿಗ್ನಲ್‌ ಅಳವಡಿಸಲಾಗುವುದು’ ಎಂದು ವಿವರಿಸಿದರು.

ಕೆಲವು ಜಂಕ್ಷನ್‌ಗಳಲ್ಲಿ ಸಮಸ್ಯೆ
ಎಐ ತಂತ್ರಜ್ಞಾನ ಬಳಸಿಕೊಂಡು ನಗರದ ಹಲವು ಜಂಕ್ಷನ್‌ಗಳಲ್ಲಿ ಎಟಿಸಿಎಸ್‌ ಅಳವಡಿಕೆ ಮಾಡಲಾಗುತ್ತಿದೆ. ಸಣ್ಣ ಜಂಕ್ಷನ್‌ಗಳಲ್ಲೂ ಕಾಮಗಾರಿ ನಡೆಸಲಾಗುತ್ತಿದೆ. ಕೆಲವು ಜಂಕ್ಷನ್‌ಗಳಲ್ಲಿ ಈ ಎಟಿಸಿಎಸ್‌ ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಾಹನ ದಟ್ಟಣೆಯನ್ನು ಸರಿಯಾಗಿ ಗ್ರಹಿಸುತ್ತಿಲ್ಲ. ಅಲ್ಲದೇ ಏಕಾಏಕಿ ಹಸಿರು ದೀಪ ಬೆಳಗಿಸುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಅಲ್ಲದೇ ಪಾದಚಾರಿಗಳಿಗೆ ಆಗುತ್ತಿರುವ ಸಮಸ್ಯೆಯನ್ನೂ ಪರಿಹರಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.