ADVERTISEMENT

Brand Bengaluru: ವಿಮಾನ ನಿಲ್ದಾಣದಲ್ಲಿ ‘ಕಲಾ ಲೋಕ’ ಮಳಿಗೆ

ಕೆಐಎಎಲ್‌ನಲ್ಲೂ ಸಿಗಲಿದೆ ಚನ್ನಪಟ್ಟಣ ಆಟಿಕೆ, ಇಳಕಲ್‌ ಸೀರೆ: ಒಂದೇ ಸೂರಿನಡಿ ನಾಡಿನ ಪಾರಂಪರಿಕ–ವಿಶಿಷ್ಟ ಉತ್ಪನ್ನಗಳು ಲಭ್ಯ

ವರುಣ ಹೆಗಡೆ
Published 10 ನವೆಂಬರ್ 2025, 23:55 IST
Last Updated 10 ನವೆಂಬರ್ 2025, 23:55 IST
ಕಲಾ ಲೋಕ ಮಳಿಗೆಯ ಹೊರಾಂಗಣ ನೋಟ
ಕಲಾ ಲೋಕ ಮಳಿಗೆಯ ಹೊರಾಂಗಣ ನೋಟ   

ಬೆಂಗಳೂರು: ಚನ್ನಪಟ್ಟಣದ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕಸೂತಿ ಸೇರಿ ನಾಡಿನ ಅಸ್ಮಿತೆ ಬಿಂಬಿಸುವ ಉತ್ಪನ್ನಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ (ಕೆಐಎಎಲ್‌) ದೊರೆಯಲಿವೆ. ಕೆಐಎಎಲ್‌ನಲ್ಲಿ ಈಗಾಗಲೇ ‘ಕಲಾ ಲೋಕ’ ಮಳಿಗೆಗಳು ತಲೆಯೆತ್ತಿದ್ದು, ದೇಶ–ವಿದೇಶದ ಪ್ರಯಾಣಿಕರನ್ನು ತನ್ನತ್ತ ಕೈಬೀಸಿ ಕರೆಯಲು ಅಣಿಗೊಂಡಿವೆ. 

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಈ ವಿಮಾನ ನಿಲ್ದಾಣಕ್ಕೆ ಪ್ರತಿ ವರ್ಷ ಕೋಟ್ಯಂತರ ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ. ಇದು ದೇಶದ ಅತ್ಯಂತ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ವಿಮಾನ ನಿಲ್ದಾಣದ ಟರ್ಮಿನಲ್ –2 ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಹಸಿರು ವಿನ್ಯಾಸವನ್ನು ಹೊಂದಿದ್ದು, ಸಂಸ್ಕರಿಸಿದ ಬಿದಿರು ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ದೇಶೀಯ ಮತ್ತು ಅಂತರರಾಷ್ಟ್ರೀಯ ನಿರ್ಗಮನ ವಲಯದಲ್ಲಿ ಕೈಗಾರಿಕೆ ಇಲಾಖೆಯಡಿ ‘ಕಲಾ ಲೋಕ’ ಮಳಿಗೆಗಳನ್ನು ಆರಂಭಿಸಲಾಗಿದೆ. ದೇಶಿಯ ನಿರ್ಗಮನ ವಲಯದಲ್ಲಿನ ಮಳಿಗೆ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಭೌಗೋಳಿಕ ಸೂಚಕ (ಜಿಐ ಟ್ಯಾಗ್) ಪಡೆದ ನಾಡಿನ ಆಯ್ದ ಉತ್ಪನ್ನಗಳ ಜತೆಗೆ ಇಲ್ಲಿನ ವಿಶೇಷ ಹಾಗೂ ಪಾರಂಪರಿಕ ಉತ್ಪನ್ನಗಳು ದೊರೆಯಲಿವೆ.

ಚನ್ನಪಟ್ಟಣದ ಬೊಂಬೆ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಈ ಮಳಿಗೆಗಳ ನಿರ್ಮಾಣಕ್ಕೆ ದೇಶೀಯ ಪ್ರಯಾಣಿಕರ ನಿರ್ಗಮನ ಪ್ರದೇಶದಲ್ಲಿ 132 ಚದರ ಮೀಟರ್ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರ ನಿರ್ಗಮನ ವಲಯದಲ್ಲಿ 140 ಚದರ ಮೀಟರ್ ಸ್ಥಳಾವಕಾಶ ಒದಗಿಸಿದೆ. ಈ ಮಳಿಗೆಗಳ ಬಾಡಿಗೆ ಶುಲ್ಕದಲ್ಲಿ ಬಿಐಎಎಲ್ ಶೇ 50ರಷ್ಟು ರಿಯಾಯಿತಿ ಒದಗಿಸಲಿದೆ. ಉದ್ಘಾಟನೆಗೆ ಸಜ್ಜುಗೊಂಡಿರುವ ಮಳಿಗೆಯ ಆಕರ್ಷಕ ಹೊರನೋಟವು ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣ ಮಾಡುತ್ತಿದೆ. ಒಳಾಂಗಣದಲ್ಲಿ ಕೂಡ ಬೆಳಕಿನ ವಿನ್ಯಾಸದ ನಡುವೆ ಉತ್ಪನ್ನಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಮೈಸೂರು ಸ್ಯಾಂಡಲ್‌ ಸೋಪು, ಮೈಸೂರು ಸಿಲ್ಕ್ ಸೀರೆ ಸೇರಿ ವಿವಿಧ ಉತ್ಪನ್ನಗಳ ವಿಶೇಷತೆ ಹಾಗೂ ಸಂಕ್ಷಿಪ್ತ ಇತಿಹಾಸವೂ ಲಭ್ಯ.

ADVERTISEMENT

ಸರ್ಕಾರಿ ಸಂಸ್ಥೆಗಳ ಉತ್ಪನ್ನ: ಪ್ರತಿ ಉತ್ಪನ್ನಕ್ಕೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಿ, ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ. ಈಗಾಗಲೇ ರಾಜ್ಯದ 45 ಉತ್ಪನ್ನಗಳು ಜಿಐ ಟ್ಯಾಗ್ ಹೊಂದಿದ್ದು, ಅವುಗಳಲ್ಲಿ ಆಯ್ದ ಉತ್ಪನ್ನಗಳು ಇಲ್ಲಿ ಕಾಣಸಿಗುತ್ತವೆ. ನಾಡಿನ ವಿಶೇಷ ಹಾಗೂ ಪಾರಂಪರಿಕ ಉತ್ಪನ್ನಗಳ ಜತೆಗೆ ಸರ್ಕಾರಿ ಸಂಸ್ಥೆಗಳು ಸಿದ್ಧಪಡಿಸುತ್ತಿರುವ ಉತ್ಪನ್ನಗಳೂ ಇಲ್ಲಿ ದೊರೆಯಲಿವೆ. ಕಾಫಿ ಮಂಡಳಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಂತಹ ಸಂಸ್ಥೆಗಳ ಉತ್ಪನ್ನಗಳನ್ನೂ ಇಲ್ಲಿ ಇರಿಸಲಾಗಿದೆ. 

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಮಳಿಗೆಗಳ ನಿರ್ಮಾಣದಿಂದ ಮೈಸೂರು ಸ್ಯಾಂಡಲ್‌ ಸೋಪಿನಂತಹ ಉತ್ಪನ್ನಗಳು ಜಗತ್ತಿನ ಎಲ್ಲೆಡೆ ತನ್ನ ಕಂಪನ್ನು ಪಸರಿಸುವ ಸಾಧ್ಯತೆಯಿದೆ. 2024–25ರಲ್ಲಿ ಈ ವಿಮಾನ ನಿಲ್ದಾಣವನ್ನು 4.18 ಕೋಟಿ ಪ್ರಯಾಣಿಕರು ಬಳಕೆ ಮಾಡಿದ್ದರು. ದಿನಕ್ಕೆ ಸರಾಸರಿ 1.15 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

ಟರ್ಮಿನಲ್ 1 ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. 2023ರಲ್ಲಿ ಕಾರ್ಯಾರಂಭಗೊಂಡ ಟರ್ಮಿನಲ್ 2ರ ಮೊದಲನೇ ಹಂತವು 12.55 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು, ವಾರ್ಷಿಕ 1.6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಮಳಿಗೆಯ ಒಳಾಂಗಣ ವಿನ್ಯಾಸ
ವಿಮಾನ ನಿಲ್ದಾಣದ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ಈ ಮಳಿಗೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಉತ್ಪನ್ನಗಳ ಬ್ರ್ಯಾಂಡಿಗ್ ಮಾಡಲು ಸಹ ಈ ಮಳಿಗೆಗಳು ಸಹಕಾರಿಯಾಗಲಿವೆ
– ಎಂ.ಬಿ. ಪಾಟೀಲ ಕೈಗಾರಿಕೆ ಸಚಿವ
ಕಾಫಿ ಸವಿಯಲು ಅವಕಾಶ
ಈ ಮಳಿಗೆಗಳಲ್ಲಿ ಕರ್ನಾಟಕದ ಕಾಫಿ ಸವಿಯಲು ಅವಕಾಶ ಇರಲಿದೆ. ವಿವಿಧ ಸ್ವಾದಗಳ ಕಾಫಿಯನ್ನು ಸ್ಥಳದಲ್ಲಿಯೇ ಸಿದ್ಧಪಡಿಸಿ ಕೊಡಲಾಗುತ್ತದೆ. ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿವಿಧ ಬಗೆಯ ಕಾಫಿ ಪುಡಿಯನ್ನು ಕೂಡ ಮಾರಾಟಕ್ಕೆ ಇರಿಸಲಾಗಿದೆ.
ಮಳಿಗೆಯಲ್ಲಿ ಏನೆಲ್ಲ ಇರಲಿದೆ? 
ಮೈಸೂರು ಸಿಲ್ಕ್ ಸೀರೆ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು ಮೈಸೂರು ಸಾಂಪ್ರದಾಯಿಕ ಚಿತ್ರಕಲೆ ಬಿದರಿ ಕಲೆ ಹೊಂದಿರುವ ಉತ್ಪನ್ನಗಳು ಮೈಸೂರು ರೋಸ್‌ ವುಡ್‌ ಇನ್ಲೆ ಕಲಾಕೃತಿಗಳು ಶ್ರೀಗಂಧದ ಕೆತ್ತನೆಗಳು ಶ್ರೀಗಂಧದ ಸೋಪು ಶ್ರೀಗಂಧದ ಎಣ್ಣೆ ಅಗರಬತ್ತಿ ಸಾಂಪ್ರದಾಯಿಕ ರೇಷ್ಮೆ ಸೀರೆಗಳು ಚರ್ಮದ ಉತ್ಪನ್ನಗಳು ಕಾಫಿ ಪುಡಿ ಹಾಗೂ ಸಹ ಉತ್ಪನ್ನಗಳ ಜತೆಗೆ ಪಾರಂಪರಿಕ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ಉತ್ಪನ್ನಗಳು ದೊರೆಯಲಿವೆ.

ಇಂದು ಉದ್ಘಾಟನೆ

ದೇಶಿಯ ನಿರ್ಗಮನ ವಲಯದಲ್ಲಿ ನಿರ್ಮಾಣಗೊಂಡಿರುವ ಕಲಾಲೋಕ ಮಳಿಗೆಯ ಉದ್ಘಾಟನಾ ಸಮಾರಂಭವನ್ನು ನ.11ರಂದು ಮಧ್ಯಾಹ್ನ 12.30ಕ್ಕೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿರುತ್ತಾರೆ. ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸುತ್ತಾರೆ.

ಶ್ರೀಗಂಧದ ಕಲಾಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.