
ಬೆಂಗಳೂರು: ‘ಸ್ತನ ಕ್ಯಾನ್ಸರ್ ತಡೆಗೆ ತಪಾಸಣೆಯೇ ಪರಿಹಾರವಾಗಿದ್ದು, ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ ಸಾಧ್ಯವಾಗಲಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 20ರಿಂದ 40 ವರ್ಷದೊಳಗಿನವರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ದುಪ್ಪಟ್ಟಾಗಿವೆ’ ಎಂದು ಅಪೋಲೊ ಕ್ಯಾನ್ಸರ್ ಸೆಂಟರ್ ತಜ್ಞರು ಕಳವಳ ವ್ಯಕ್ತಪಡಿಸಿದರು.
ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಈ ಸೆಂಟರ್ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಕೊಲೇಟ್ ಮೂಲಕ ಜಾಗೃತಿ ಸಂದೇಶ ಸಾರುವ ‘ಚೆಕ್-ಒಲೇಟ್’ ಅಭಿಯಾನಕ್ಕೆ ನಟಿ ಪೂಜಾ ಗಾಂಧಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕ್ಯಾನ್ಸರ್ ತಜ್ಞೆ ಡಾ. ಜಯಂತಿ ತುಮ್ಸಿ, ‘ವಯಸ್ಸಾದ ಮಹಿಳೆಯರಿಗೆ ಮಾತ್ರ ಸ್ತನ ಕ್ಯಾನ್ಸರ್ ಸೀಮಿತವಾಗಿರದೆ, ಯುವತಿಯರಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ರತಿ ತಿಂಗಳು ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. ವರ್ಷಕ್ಕೆ ಒಮ್ಮೆಯಾದರೂ ‘ಮ್ಯಾಮೋಗ್ರಾಮ್’ ಪರೀಕ್ಷೆಗೆ ಒಳಪಡಬೇಕು. ದೇಶದಲ್ಲಿ ಪ್ರತಿ ವರ್ಷ 2 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳದ ಪರಿಣಾಮ, ಶೇ 60ರಷ್ಟು ಮಂದಿಯಲ್ಲಿ ತಡವಾಗಿ ರೋಗ ಪತ್ತೆಯಾಗುತ್ತಿದೆ’ ಎಂದು ಹೇಳಿದರು.
ಅಪೋಲೊ ಆಸ್ಪತ್ರೆಗಳ ಸಮೂಹದ ಆಂಕಾಲಜಿ ವಿಭಾಗದ ಅಧ್ಯಕ್ಷ ದಿನೇಶ್ ಮಾಧವನ್, ‘ಡಾರ್ಕ್ ಚಾಕೊಲೇಟ್‌ನಲ್ಲಿರುವ ‘ಆ್ಯಂಟಿಆಕ್ಸಿಡೆಂಟ್’ ಮತ್ತು ‘ಫ್ಲಾವನಾಯ್ಡ್’ಗಳು ಹೃದಯ, ಚರ್ಮ ಮತ್ತು ಮನೋಸ್ಥಿತಿ ಸುಧಾರಿಸಲು ಸಹಕಾರಿ. ಆದ್ದರಿಂದ ಸಿಹಿ ತಿನಿಸಿನ ಮೂಲಕ ಕ್ಯಾನ್ಸರ್ ತಪಾಸಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿ ‘ಚೆಕ್-ಒಲೇಟ್’ ಬಾಕ್ಸ್‌ನಲ್ಲೂ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಸ್ಕ್ಯಾನ್ ಮಾಡಿದಾಗ ಸ್ತನವನ್ನು ಸ್ವಯಂ ತಪಾಸಣೆ ಮಾಡುವ ವಿಧಾನದ ವಿಡಿಯೊ ತೆರೆದುಕೊಳ್ಳುತ್ತದೆ. ಈ ಚಾಕೊಲೋಟ್ ಬಾಕ್ಸ್‌ಗಳು ಅಪೋಲೊ ಮಳಿಗೆಗಳಲ್ಲಿ ಲಭ್ಯ’ ಎಂದರು.
ಕ್ಯಾನ್ಸರ್ ತಜ್ಞರಾದ ಡಾ. ವಿಜಯ್ ಅಗರ್ವಾಲ್, ಡಾ. ಪೂನಂ, ಡಾ. ಯತೀಶ್ ಉಪಸ್ಥಿತರಿದ್ದರು.
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ಮಹಿಳೆಯರು ಆರೋಗ್ಯಕ್ಕೆ ಆದ್ಯತೆ ನೀಡಿ ಪ್ರತಿ ವರ್ಷ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕುಪೂಜಾ ಗಾಂಧಿ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.