ADVERTISEMENT

ಕ್ಯಾನ್ಸರ್: ಸ್ತನ ಛೇದಿಸಿ ಮರು ನಿರ್ಮಾಣ

ಅಪೋಲೊ ಕ್ಯಾನ್ಸರ್ ಸೆಂಟರ್ ವೈದ್ಯರಿಂದ ಸ್ತನ ಕ್ಯಾನ್ಸರ್ ಪೀಡಿತರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 15:11 IST
Last Updated 16 ಜನವರಿ 2025, 15:11 IST
ಡಾ. ಜಯಂತಿ ತುಮ್ಸಿ ಅವರು ಶಸ್ತ್ರಚಿಕಿತ್ಸೆ ಬಗ್ಗೆ ವಿವರಿಸಿದರು. ದಿನೇಶ್ ಮಾಧವನ್ ಹಾಗೂ ಡಾ. ಮನೀಶ್ ಮಟ್ಟು ಉಪಸ್ಥಿತರಿದ್ದರು
ಡಾ. ಜಯಂತಿ ತುಮ್ಸಿ ಅವರು ಶಸ್ತ್ರಚಿಕಿತ್ಸೆ ಬಗ್ಗೆ ವಿವರಿಸಿದರು. ದಿನೇಶ್ ಮಾಧವನ್ ಹಾಗೂ ಡಾ. ಮನೀಶ್ ಮಟ್ಟು ಉಪಸ್ಥಿತರಿದ್ದರು   

ಬೆಂಗಳೂರು: ಇಲ್ಲಿನ ಅಪೋಲೊ ಕ್ಯಾನ್ಸರ್ ಸೆಂಟರ್‌ನ ವೈದ್ಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯರಿಗೆ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಿ, ಕ್ಯಾನ್ಸರ್ ಕೋಶಗಳ ಗಡ್ಡೆ ತೆಗೆದ ಜಾಗದಲ್ಲಿ ‘ಟೈಲೂಪ್ ಬ್ರೆಸ್ಟ್ ಇಂಪ್ಲಾಂಟ್’ ಅಳವಡಿಸುವ ಮೂಲಕ ಸ್ತನವನ್ನು ಮರು ನಿರ್ಮಾಣ ಮಾಡಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಟರ್‌ನ ರೊಬೊಟಿಕ್ ಸ್ತನ ಶಸ್ತ್ರಚಿಕಿತ್ಸಕಿ ಡಾ. ಜಯಂತಿ ತುಮ್ಸಿ, ‘ಸ್ತನ ಕ್ಯಾನ್ಸರ್ ವಯಸ್ಸಾದ ಮಹಿಳೆಯರಿಗೆ ಮಾತ್ರ ಸೀಮಿತವಾಗಿರದೆ, ಯುವತಿಯರಲ್ಲಿಯೂ ಕಂಡುಬರುತ್ತಿದೆ. ಕೆಲ ಪ್ರಕರಣಗಳಲ್ಲಿ ಪೂರ್ಣ ಸ್ತನವನ್ನು ತೆಗೆಯಬೇಕಾಗುತ್ತದೆ. ಇದರಿಂದ ಕೆಲವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ‌ ಛೇದಿಸಿದ ಸ್ತನದ ಮರುನಿರ್ಮಾಣ ಕೂಡ ಮುಖ್ಯವಾಗುತ್ತದೆ. ಇದಕ್ಕಾಗಿ ಕೇಂದ್ರದಲ್ಲಿ ರೊಬೊಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು, ‘ಟೈಲೂಪ್ ಬ್ರೆಸ್ಟ್ ಇಂಪ್ಲಾಂಟ್’ ಮೂಲಕ ಸ್ತನಕ್ಕೆ ಮೊದಲಿನ ಸ್ವರೂಪ ನೀಡಲಾಗುತ್ತಿದೆ. ಇತ್ತೀಚೆಗೆ ಇಬ್ಬರಿಗೆ ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಸ್ತನವನ್ನು ಮರು ನಿರ್ಮಾಣ ಮಾಡಲಾಗಿದೆ. ಇಬ್ಬರೂ ಚೇತರಿಸಿಕೊಂಡಿದ್ದಾರೆ’ ಎಂದರು. 

‘ರೊಬೊಟಿಕ್ ತಂತ್ರಜ್ಞಾನ ಆಧಾರಿತ ಶಸ್ತ್ರಚಿಕಿತ್ಸೆಯಲ್ಲಿ ಕಂಕುಳ ಕೆಳಗಡೆ ಸಣ್ಣದಾಗಿ ರಂಧ್ರ ಮಾಡಿ, ರೋಗಕಾರಕ ಭಾಗವನ್ನು ತೆಗೆಯಲಾಗುತ್ತದೆ. ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಗಡ್ಡೆಯ ಜಾಗ ತುಂಬಲು ದೇಹದ ಆಯ್ದ ಭಾಗಗಳಿಂದ ಮಾಂಸಖಂಡ ತೆಗೆದು, ಅಳವಡಿಸಲಾಗುತ್ತಿತ್ತು. ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಚೇತರಿಸಿಕೊಳ್ಳಲು ಹೆಚ್ಚಿನ ಅವಧಿ ಹಿಡಿಯಲಿದೆ. ಈಗ ತಂತ್ರಜ್ಞಾನದ ನೆರವಿನಿಂದ ‘ಟೈಲೂಪ್ ಬ್ರೆಸ್ಟ್ ಇಂಪ್ಲಾಂಟ್’ ಅಳವಡಿಸಿ, ಇನ್ನೊಂದು ಸ್ತನಕ್ಕೆ ಹೊಂದಾಣಿಕೆಯಾಗುವಂತೆ ವಿನ್ಯಾಸ ಮಾಡಲಾಗುತ್ತದೆ. ಬಳಿಕ ರೆಡಿಯೇಶನ್ ಥೆರಪಿ ನೀಡಲಾಗುತ್ತದೆ. ಇದರಿಂದ ರೋಗಿ ಕ್ಯಾನ್ಸರ್‌ನಿಂದ ಬೇಗ ಚೇತರಿಸಿಕೊಳ್ಳುತ್ತಾರೆ’ ಎಂದು ವಿವರಿಸಿದರು. 

ADVERTISEMENT

ಈ ಶಸ್ತ್ರಚಿಕಿತ್ಸಾ ವಿಧಾನದಿಂದ ಚೇತರಿಸಿಕೊಂಡವರು ತಮ್ಮ ಅನುಭವ ಹಂಚಿಕೊಂಡರು. ಅಪೋಲೊ ಕ್ಯಾನ್ಸರ್ ಸೆಂಟರ್‌ನ ಕರ್ನಾಟಕ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮನೀಶ್ ಮಟ್ಟು ಹಾಗೂ ಕೇಂದ್ರದ ದಿನೇಶ್ ಮಾಧವನ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.