ADVERTISEMENT

ಸ್ತನ ಕ್ಯಾನ್ಸರ್: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ತಪಾಸಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 16:29 IST
Last Updated 27 ಅಕ್ಟೋಬರ್ 2021, 16:29 IST
ಸ್ತನ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ
ಸ್ತನ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ   

ಬೆಂಗಳೂರು: ಶಾಂತಿನಗರದ ಕೆಎಸ್‌ಆರ್‌ಟಿಸಿ ಬಸ್‌ ಟರ್ಮಿನಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆಇಲ್ಲಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಉಚಿತವಾಗಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿದರು.

ಸ್ತನ ಕ್ಯಾನ್ಸರ್ ಮಾಸದ ಪ‍್ರಯುಕ್ತ ಆಸ್ಪತ್ರೆಯು ಜಾಗೃತಿ ಹಾಗೂ ತಪಾಸಣೆ ಅಭಿಯಾನವನ್ನು ನಗರದ ವಿವಿಧೆಡೆ ಹಮ್ಮಿಕೊಂಡಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗ‌ದ ಸಹಯೋಗದಲ್ಲಿ 60 ಮಹಿಳಾ ಸಿಬ್ಬಂದಿಗೆ ಸ್ತನ ಕ್ಯಾನ್ಸರ್ ತಪಾಸಣೆಯನ್ನುಬುಧವಾರ ನಡೆಸಲಾಯಿತು. ಕ್ಯಾನ್ಸರ್ ಕಾಯಿಲೆಯ ಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.

‘ಸ್ತನ ಕ್ಯಾನ್ಸರ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿವೆ. ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ರೋಗದ ಲಕ್ಷಣವನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಗುಣಪಡಿಸಲು ಸಾಧ್ಯ. ತಡವಾಗಿ ಆಸ್ಪತ್ರೆಗಳಿಗೆ ತೆರಳಿದಲ್ಲಿ ಸಮಸ್ಯೆ ಉಲ್ಬಣವಾಗಿ, ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಮ್ಮ ಸಿಬ್ಬಂದಿಗೂ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಿ, ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

ADVERTISEMENT

ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ.ಆರ್. ಪ್ರಮಿತಾ, ‘ಪ್ರತಿ ಮಹಿಳೆಯೂ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತವಾಗಿರಬೇಕು.ಈ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಮಾಡಿದಲ್ಲಿ ಇಡೀ ಜೀವನ ಹಾಳಾಗಲಿದೆ.ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳದ ಕಾರಣ ಕೆಲವರಿಗೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ, ಪ್ರತಿ ವರ್ಷ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ಆಸ್ಪತ್ರೆಯ ಉಪಾಧ್ಯಕ್ಷ ಮೋಹನ್ ಕುಮಾರ್,ನಿಗಮದಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್. ಲತಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.