ADVERTISEMENT

ಸ್ತನ್ಯಪಾನ ಸಪ್ತಾಹ: ಎದೆ ಹಾಲಿನ ಬಗ್ಗೆ ಜಾಗೃತಿ

ಜಾಥಾ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಎದೆ ಹಾಲಿನ ಮಹತ್ವ ಸಾರಿದ ವಾಣಿವಿಲಾಸ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 14:47 IST
Last Updated 7 ಆಗಸ್ಟ್ 2025, 14:47 IST
ವಾಣಿವಿಲಾಸ ಆಸ್ಪತ್ರೆ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಎದೆ ಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು
ವಾಣಿವಿಲಾಸ ಆಸ್ಪತ್ರೆ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಎದೆ ಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು   

ಬೆಂಗಳೂರು: ವಿಶ್ವ ಸ್ತನ್ಯಪಾನ ಸಪ್ತಾಹದ ಪ್ರಯುಕ್ತ ವಾಣಿವಿಲಾಸ ಆಸ್ಪತ್ರೆಯು ನಗರದ ವಿವಿಧೆಡೆ ಜಾಥಾ, ಬೀದಿ ನಾಟಕ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿ, ತಾಯಂದಿರು ಹಾಗೂ ಸಾರ್ವಜನಿಕರಿಗೆ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಿತು. 

ಆ.1ರಿಂದ ಪ್ರಾರಂಭವಾದ ಈ ಸಪ್ತಾಹ ಗುರುವಾರ ಸಂಪನ್ನವಾಯಿತು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಆಸ್ಪತ್ರೆಗಳ ಸಂಕೀರ್ಣದ ಆವರಣ ಹಾಗೂ ಸುತ್ತಮುತ್ತ ಜಾಗೃತಿ ಜಾಥಾ ನಡೆಯಿತು. ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

‘ಮಗು ಜನಿಸಿದ ತಕ್ಷಣ ಅಥವಾ ಒಂದು ಗಂಟೆಯೊಳಗೆ ಎದೆ ಹಾಲು ಉಣಿಸಲು ಪ್ರಾರಂಭಿಸಬೇಕು. ಮೊದಲ ಆರು ತಿಂಗಳು ಮಗುವಿಗೆ ಎದೆ ಹಾಲು ಮಾತ್ರ ಉಣಿಸಬೇಕು. 6 ತಿಂಗಳು ತುಂಬಿದ ಬಳಿಕ ಎದೆಹಾಲಿನ ಜತೆಗೆ ಪೂರಕ ಆಹಾರ ಒದಗಿಸಲು ಪ್ರಾರಂಭಿಸಬೇಕು. ಕನಿಷ್ಠ ಎರಡು ವರ್ಷ ಎದೆ ಹಾಲು ನೀಡಬೇಕು’ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸಹನಾ ದೇವದಾಸ್ ಹೇಳಿದರು. 

ADVERTISEMENT

‘ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆಹಾಲು ಸಹಕಾರಿ. ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ  ಹೆಚ್ಚಾಗಲಿದೆ. ಎದೆ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕತೆ, ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ‌. ಮಗುವಿಗೆ ಇದು ಮೊದಲ ಲಸಿಕೆಯಾಗಲಿದೆ. ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ಸೋಂಕುಗಳಿಂದ ರಕ್ಷಣೆ ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅರಿವಿನ ಕೊರತೆ: ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌–5) ಪ್ರಕಾರ, ರಾಜ್ಯದಲ್ಲಿ ಶೇ 41.1ರಷ್ಟು ತಾಯಂದಿರು ಮಾತ್ರ ಮಗು ಜನಿಸಿದ ಒಂದು ಗಂಟೆಯೊಳಗೆ ಎದೆ ಹಾಲು ಉಣಿಸಲು ಪ್ರಾರಂಭಿಸುತ್ತಿದ್ದಾರೆ. ಮೊದಲ ಆರು ತಿಂಗಳು ಎದೆಹಾಲು ನೀಡುವ ತಾಯಂದಿರ ಪ್ರಮಾಣ ಶೇ 63.7 ರಷ್ಟಿದೆ. ಅರಿವಿನ ಕೊರತೆಯೇ ಇದಕ್ಕೆ ಕಾರಣ’ ಎಂದು ಡಾ. ಸಹನಾ ಬೇಸರ ವ್ಯಕ್ತಪಡಿಸಿದರು. 

ಸಮಾರೋಪ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಬಿಎಂಸಿಆರ್‌ಐ ಡೀನ್ ಡಾ. ರಮೇಶ್ ಕೃಷ್ಣ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸಿ. ಸವಿತಾ, ಸ್ಥಾನಿಕ ವೈದ್ಯಾಧಿಕಾರಿ ಡಾ. ಸಂತೋಷ್, ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಎನ್. ರೆಡ್ಡಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.