ADVERTISEMENT

ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:13 IST
Last Updated 17 ಮಾರ್ಚ್ 2023, 22:13 IST
   

ಬೆಂಗಳೂರು: ಜಮೀನಿನ ಮ್ಯುಟೇಷನ್‌ ದಾಖಲೆಯನ್ನು ಖರೀದಿದಾರರ ಹೆಸರಿಗೆ ವರ್ಗಾಯಿಸಲು ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 2 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದ ಪ್ರಕರಣದಲ್ಲಿ ಕೆಂಗೇರಿ ಹೋಬಳಿಯ ಕಂದಾಯ ನಿರೀಕ್ಷಕ ಸುರೇಶ್‌ ಜಿ.ಸಿ. ದೋಷಿ ಎಂದು ತೀರ್ಮಾನಿಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ, ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 4 ಲಕ್ಷ ದಂಡ ವಿಧಿಸಿದೆ.

ರಾಷ್ಟ್ರಕೂಟ ಬಿಲ್ಡರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಅಧ್ಯಕ್ಷ ರವಿಕುಮಾರ್‌ ವಿ. ಮತ್ತು ರಶ್ಮಿ ಜಿ. ಎಂಬುವವರು 2015ರಲ್ಲಿ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿನ ಮ್ಯುಟೇಷನ್‌ ದಾಖಲೆಯನ್ನು ಖರೀದಿದಾರರ ಹೆಸರಿಗೆ ವರ್ಗಾಯಿಸುವಂತೆ ಕೋರಿ ರಾಷ್ಟ್ರಕೂಟ ಬಿಲ್ಡರ್ಸ್‌ ಸಂಸ್ಥೆಯ ಸಿಬ್ಬಂದಿ ಆಸಿಫ್‌ ಖಾನ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಮ್ಯುಟೇಷನ್‌ ಬದಲಾವಣೆ ಮಾಡಲು ₹ 5 ಲಕ್ಷ ಲಂಚ ನೀಡುವಂತೆ ಸುರೇಶ್‌ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಸಿ ಮಾಡಿದಾಗ, ₹ 4 ಲಕ್ಷ ಕೊಟ್ಟರೆ ಮ್ಯುಟೇಷನ್‌ ಬದಲಿಸಲು ಒಪ್ಪಿಕೊಂಡಿದ್ದರು. ₹ 2 ಲಕ್ಷವನ್ನು ಮುಂಗಡ ಪಡೆದಿದ್ದರು. ಕೊನೆಯ ಕಂತಿನ ₹ 2 ಲಕ್ಷ ನೀಡುವ ಮುನ್ನ ಎಸಿಬಿಗೆ ದೂರು ನೀಡಿದ್ದರು. 2016ರ ಸೆ.2ರಂದು ₹ 2 ಲಕ್ಷ ಲಂಚ ಪಡೆಯುತ್ತಿದ್ದಾಗ ಕಂದಾಯ ನಿರೀಕ್ಷಕರನ್ನು ಬಂಧಿಸಲಾಗಿತ್ತು.

ADVERTISEMENT

ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ಮುಗಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್‌ ಕೆ., ‘ಸುರೇಶ್‌ ವಿರುದ್ಧದ ಆರೋಪಗಳು ಸಾಬೀತಾಗಿವೆ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಪಡೆದಿರುವುದು ದೃಢಪಟ್ಟಿದೆ’ ಎಂದು ಪ್ರಕಟಿಸಿದರು.

ಸುರೇಶ್‌ ಅವರಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 4 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ನಾಲ್ಕು ತಿಂಗಳ ಸಾಧಾರ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.