ADVERTISEMENT

‘ಬದಲಾಗದ ಬ್ರಿಟಿಷ್‌ ಕಾಲದ ವ್ಯವಸ್ಥೆ’: ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು

ಸಂವಿಧಾನ ರಕ್ಷಣೆಗೆ ನ್ಯಾಯಾಂಗ ಕ್ರಿಯಾಶೀಲವಾಗಿರಬೇಕು: ನಿವೃತ್ತ ನ್ಯಾ. ಕೆ. ಚಂದ್ರು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 21:36 IST
Last Updated 11 ಡಿಸೆಂಬರ್ 2021, 21:36 IST
‘ಮಾನವ ಹಕ್ಕುಗಳು’ ಕೃತಿಯನ್ನು ಬಿಡುಗಡೆ ಮಾಡಿದ ನಿವೃತ್ತ ನ್ಯಾ. ಕೆ. ಚಂದ್ರು ಅವರು ಪ್ರತಿಯನ್ನು ಕೃತಿಯ ಲೇಖಕ ನಿವೃತ್ತ ನ್ಯಾ.ಎಚ್‌.ಎನ್‌. ನಾಗಮೋಹನ ದಾಸ್‌ ಅವರಿಗೆ ನೀಡಿದರು. (ಎಡದಿಂದ) ರಾಜಶೇಖರ ಮೂರ್ತಿ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌, ಲೇಖಕಿ ಬಿ.ಟಿ. ಲಲಿತಾ ನಾಯಕ್‌, ಅಖಿಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಎಸ್‌. ಶಂಕರಪ್ಪ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಇದ್ದಾರೆ  --–ಪ್ರಜಾವಾಣಿ ಚಿತ್ರ
‘ಮಾನವ ಹಕ್ಕುಗಳು’ ಕೃತಿಯನ್ನು ಬಿಡುಗಡೆ ಮಾಡಿದ ನಿವೃತ್ತ ನ್ಯಾ. ಕೆ. ಚಂದ್ರು ಅವರು ಪ್ರತಿಯನ್ನು ಕೃತಿಯ ಲೇಖಕ ನಿವೃತ್ತ ನ್ಯಾ.ಎಚ್‌.ಎನ್‌. ನಾಗಮೋಹನ ದಾಸ್‌ ಅವರಿಗೆ ನೀಡಿದರು. (ಎಡದಿಂದ) ರಾಜಶೇಖರ ಮೂರ್ತಿ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌, ಲೇಖಕಿ ಬಿ.ಟಿ. ಲಲಿತಾ ನಾಯಕ್‌, ಅಖಿಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಎಸ್‌. ಶಂಕರಪ್ಪ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಇದ್ದಾರೆ  --–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂವಿಧಾನ ರಕ್ಷಿಸುವ ಮತ್ತು ಅದರ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ನ್ಯಾಯಾಂಗ ಯಾವತ್ತೂ ಕ್ರಿಯಾಶೀಲವಾಗಿರಬೇಕು’ ಎಂದು ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಅಭಿಪ್ರಾಯ ಪಟ್ಟರು.

ನಗರದಲ್ಲಿ ಶನಿವಾರ ನ್ಯಾಯ ಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್ ಅವರ ‘ಮಾನವ ಹಕ್ಕುಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಜೈಭೀಮ್’ ಚಲನಚಿತ್ರಕ್ಕೆ ಸ್ಫೂರ್ತಿಯಾಗಿರುವ ಚಂದ್ರು ಅವರು, ಸಮಾಜದ ಮೇಲೆ ಚಲನಚಿತ್ರವೊಂದು ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ವಿವರಿಸಿದರು.

ADVERTISEMENT

‘ದೇಶದಲ್ಲಿ ಬ್ರಿಟಿಷರ ಕಾಲದಲ್ಲಿದ್ದ ವ್ಯವಸ್ಥೆಗಳನ್ನು ಇನ್ನೂ ಮುಂದುವರಿಸಲಾಗಿದೆ. ಹೀಗಾಗಿಯೇ ಪೊಲೀಸ್‌ ಠಾಣೆ ಗಳು ನ್ಯಾಯಾಲಯಗಳಾಗುತ್ತಿವೆ ಮತ್ತು ಇನ್‌ಸ್ಪೆಕ್ಟರ್‌ಗಳು ನ್ಯಾಯಾಧೀಶರ ರೀತಿ ವರ್ತಿಸುತ್ತಿದ್ದಾರೆ’ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

‘ಬ್ರಿಟಿಷರು 120ಕ್ಕೂ ಹೆಚ್ಚು ರೀತಿಯಲ್ಲಿ ಚಿತ್ರಹಿಂಸೆ ನೀಡುವ ಪದ್ಧತಿ ಅನುಸರಿಸುತ್ತಿದ್ದರು. ಜೈಭೀಮ್‌ ಚಲನಚಿತ್ರದಲ್ಲಿ ತೋರಿಸಿರುವುದು ಶೇಕಡ 10ರಷ್ಟು ಹಿಂಸೆಯ ಚಿತ್ರಣ ಮಾತ್ರ. ಪೊಲೀಸರ ಮನಸ್ಥಿತಿ ಬದಲಾಗಬೇಕಾಗಿದೆ. ಆದರೆ, ಪೊಲೀಸರಿಗೆ ಸತ್ಯವನ್ನು ಶೋಧಿಸುವುದು ಬೇಕಾಗಿಲ್ಲ’ ಎಂದರು.

‘ಬ್ರಿಟಿಷರ ಕಾಲದಲ್ಲಿ ಅನೇಕ ಬುಡಕಟ್ಟು ಸಮುದಾಯಗಳನ್ನು ಕ್ರಿಮಿನಲ್‌ ಪಟ್ಟಿಗೆ ಸೇರಿಸಲಾಗಿತ್ತು. ಯಾವುದೇ ಅಪರಾಧಗಳು ನಡೆದಾಗ ಈ ಸಮುದಾಯದ ಎಲ್ಲರೂ ಪೊಲೀಸ್‌ ಠಾಣೆಗೆ ಬರಬೇಕಾಗುತ್ತಿತ್ತು. ಠಾಣೆಗೆ ಬರದಿದ್ದರೆ ಅಂತಹ ವ್ಯಕ್ತಿಯನ್ನೇ ಅಪರಾಧಿ ಎಂದು ಬಿಂಬಿಸಲಾಗುತ್ತಿತ್ತು. ಸ್ವಾತಂತ್ರ್ಯ ದೊರೆತ ಬಳಿಕವೂ ಇದೇ ರೀತಿಯ ಪರಿಸ್ಥಿತಿ ಮುಂದುವರಿದಿದೆ. ಬುಡಕಟ್ಟು ಸಮುದಾಯದ ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದು, ಎನ್‌ಕೌಂಟರ್ ಮಾಡುವುದು, ಲಾಕಪ್‌ನಲ್ಲಿ ಹಿಂಸಿಸುವುದು ನಿರಂತರ ವಾಗಿ ನಡೆಯುತ್ತಲೇ ಇದೆ’ ಎಂದರು.

1990ರಲ್ಲಿ ನಡೆದ ಮಹಿಳೆಯೊಬ್ಬರ ಅತ್ಯಾಚಾರ ಮತ್ತು ಆಕೆಯ ಪತಿಯ ಹತ್ಯೆಯ ಪ್ರಕರಣ ವಿವರಿಸಿದ ಅವರು, ’ಮಹಿಳೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರಿಂದ ಆಗ ನ್ಯಾಯಮೂರ್ತಿಯಾಗಿದ್ದ ಪಿ.ಎಸ್‌. ಮಿಶ್ರಾ ಅವರು ತನಿಖೆಗೆ ಆದೇಶಿಸಿದರು. ಬಳಿಕ, ಪೊಲೀಸರ ವಿರುದ್ಧ ಆರೋಪಪಟ್ಟಿ ಹೊರಿಸಲಾಯಿತು. ಜತೆಗೆ, ಮಹಿಳೆಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡಲಾಯಿತು. ಇದು ಅಪರೂಪದ ಪ್ರಕರಣ. ಏಕೆಂದರೆ ತಪ್ಪು ಮಾಡಿದ್ದರೂ ಪೊಲೀಸರಿಗೆ ಶಿಕ್ಷೆ ನೀಡಿರುವುದು ವಿರಳ’ ಎಂದರು.

ಜನಪ್ರಕಾಶನ, ಅಖಿಲ ಭಾರತ ವಕೀಲರ ಸಂಘ, ದಲಿತ ಸಂಘರ್ಷ ಸಮಿತಿ, ದಲಿತ ಹಕ್ಕುಗಳ ಸಮಿತಿ ಕಾರ್ಯಕ್ರಮ ಆಯೋಜಿಸಿತ್ತು.

‘ದುಂದು ವೆಚ್ಚದ ತುಂಗಾ ಆರತಿ ಬೇಡ’

ದಾವಣಗೆರೆಯ ಹರಿಹರದಲ್ಲಿ ತುಂಗಾ ಆರತಿ ನಡೆಸಲು ₹30 ಕೋಟಿ ವೆಚ್ಚದಲ್ಲಿ ಮಂಟಪಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಲೇಖಕಿ ಬಿ.ಟಿ. ಲಲಿತಾ ನಾಯಕ್‌ ಆಕ್ಷೇಪ ವ್ಯಕ್ತಪಡಿಸಿದರು. ‘ಸರ್ಕಾರದ ಹಣ ಈ ರೀತಿ ಪೋಲು ಮಾಡುವುದು ಸರಿಯೇ? ಯಾವುದೋ ಮಠಾಧೀಶರ ಬಗ್ಗೆ ಪ್ರೀತಿ ತೋರಿಸಲು ಸಾರ್ವಜನಿಕರ ಹಣವನ್ನು ಖರ್ಚು ಮಾಡುವುದು ಏಕೆ? ಮುಖ್ಯಮಂತ್ರಿ ಅವರು ತಕ್ಷಣ ಈ ಯೋಜನೆ ಕೈಬಿಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.