ADVERTISEMENT

ಬೆಂಗಳೂರು | ಬಫರ್‌ ವಲಯ ಇಳಿಕೆ: ಕರಡು ಅಧಿಸೂಚನೆ

ಬೆಂಗಳೂರು ಮೆಟ್ರೊ ಪಾಲಿಟನ್ ವಲಯದ ರಾಜಕಾಲುವೆ: ಆಕ್ಷೇಪ ಸಲ್ಲಿಸಲು 30 ದಿನ ಅವಕಾಶ

ಆರ್. ಮಂಜುನಾಥ್
Published 3 ಸೆಪ್ಟೆಂಬರ್ 2025, 23:30 IST
Last Updated 3 ಸೆಪ್ಟೆಂಬರ್ 2025, 23:30 IST
ರಾಜಕಾಲುವೆ
ರಾಜಕಾಲುವೆ   

ಬೆಂಗಳೂರು: ಬೆಂಗಳೂರು ಮೆಟ್ರೊ ಪಾಲಿಟನ್ ವಲಯದಲ್ಲಿರುವ ಎಲ್ಲ ಯೋಜನಾ ಪ್ರಾಧಿಕಾರಗಳಲ್ಲಿ ರಾಜಕಾಲುವೆಗಳ ಬಫರ್‌ ವಲಯವನ್ನು ಅರ್ಧದಷ್ಟು ಕಡಿಮೆ ಮಾಡಲು ನಿರ್ಧರಿಸಿ, ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.

ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್‌ ವಲಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡುವಾಗ ಪರಿಗಣಿಸಬೇಕಾಗಿದೆ. ಇದಕ್ಕಾಗಿ, ಮಾಸ್ಟರ್‌ ಪ್ಲಾನ್‌ನಲ್ಲಿರುವ ಬಫರ್‌ ವಲಯ ವ್ಯಾಪ್ತಿಯನ್ನು ಬದಲಾಯಿಸಿ ವಲಯ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಸೆಕ್ಷನ್‌ 13–ಇಗೆ ತಿದ್ದುಪಡಿ ತಂದು, ಬೆಂಗಳೂರಿನ ಸ್ಥಳೀಯ ಯೋಜನಾ ಪ್ರಾಧಿಕಾರದ ಪರಿಷ್ಕೃತ ಮಾಸ್ಟರ್‌ ಪ್ಲಾನ್–2015, ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರದ ಮಾಸ್ಟರ್‌ ಪ್ಲಾನ್‌ ಹಾಗೂ ಬೆಂಗಳೂರು ಮೆಟ್ರೊಪಾಲಿಟನ್‌ ವಲಯದ ಎಲ್ಲ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿ ವಲಯ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಸೆ.2ರಂದು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ADVERTISEMENT

ಕೆರೆಗಳ ಬಫರ್‌ ವಲಯವನ್ನು ಕಂದಾಯ ಇಲಾಖೆಯ ದಾಖಲೆಯಂತೆ ನಿರ್ವಹಣೆ ಮಾಡಬೇಕು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯಲ್ಲಿ ಕೆರೆಗಳ ಬಫರ್‌ ವಲಯ ನಿಗದಿಯಾಗಿದೆ. ಕೆರೆಗಳ ಬಫರ್ ವಲಯವನ್ನು ‘ಮೀಸಲು ಉದ್ಯಾನ’ವನ್ನಾಗಿ ಪರಿಗಣಿಸಿ ನಕ್ಷೆ ಅನುಮೋದನೆ ನೀಡಬಹುದು ಎಂದು ಹೇಳಲಾಗಿದೆ.

ರಾಜಕಾಲುವೆಗಳಿಗೆ ಹೊಸ ವ್ಯಾಖ್ಯಾನ ನೀಡಿ, ಕಂದಾಯ ಇಲಾಖೆಯಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ಕೆರೆಯಿಂದ ಕೆರೆಗೆ ಅಥವಾ ಕೆರೆಯಿಂದ ನದಿಗೆ ಮಳೆನೀರು ಹರಿಸುವ ಕಾಲುವೆಗಳನ್ನು ಪ್ರಾಥಮಿಕ ರಾಜಕಾಲುವೆ ಎಂದು ಹೆಸರಿಸಲಾಗಿದೆ. ದ್ವಿತೀಯ ರಾಜಕಾಲುವೆ ಎಂದರೆ, ಕಂದಾಯ ಇಲಾಖೆಯಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ಕೆರೆಗಳಿಗೆ ಅಥವಾ ಪ್ರಾಥಮಿಕ ರಾಜಕಾಲುವೆಗೆ ಮಳೆ ನೀರನ್ನು ಹರಿಸುವ ಕಾಲುವೆಗಳು ಎಂದು ಹೇಳಲಾಗಿದೆ. ಕಂದಾಯ ಇಲಾಖೆಯಲ್ಲಿ ನೈಸರ್ಗಿಕ ಕಾಲುವೆ/ ನಾಲಾಗಳಾಗಿದ್ದು, ದ್ವಿತೀಯ ಹಂತದ ರಾಜಕಾಲುವೆಗೆ ಮಳೆ ನೀರು ಹರಿಸುವ ಕಾಲುವೆಗಳನ್ನು ತೃತೀಯ ರಾಜಕಾಲುವೆಗಳು ಎಂದು ವಿವರಿಸಲಾಗಿದೆ.

ಕೆರೆ ಹಾಗೂ ರಾಜಕಾಲುವೆಗಳ ಬಫರ್‌ ವಲಯ ಕಡಿಮೆ ಮಾಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಂತೆ, ಕೆಟಿಸಿಡಿಎ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ರಾಜಕಾಲುವೆ ಬಫರ್‌ ವಲಯ ಕೆಟಿಸಿಡಿಎ ವ್ಯಾಪ್ತಿಗೆ ಬಾರದಿರುವುದರಿಂದ, ಸಮಿತಿಯ ತೀರ್ಮಾನದಂತೆ ಅಧಿಸೂಚನೆ ಹೊರಡಿಸಿ, ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿ

‘ಕೆರೆಗಳ ಬಫರ್‌ ವಲಯ ಕಡಿಮೆ ಮಾಡುವುದರಿಂದ ಜೀವವೈವಿಧ್ಯತೆಗೆ ಕಂಟಕವಾಗುವುದರ ಜೊತಗೆ ಪರಿಸರ ಹಾಳಾಗುತ್ತದೆ.  ಬಫರ್‌ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಒತ್ತುವರಿಯನ್ನು ತೆರವುಗೊಳಿಸದೆ ಅದನ್ನು ಸಕ್ರಮಗೊಳಿಸಲಾಗುತ್ತದೆ. ಕೆರೆಗಳ ಪುನರುಜ್ಜೀವನಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವುದು ವ್ಯರ್ಥವಾಗುತ್ತದೆ. ಜಲಮೂಲಗಳಾದ ಕೆರೆಗಳಿಂದ ಅಂತರ್ಜಲ ಮಟ್ಟ ವೃದ್ಧಿಆಗುತ್ತದೆ. ಬಫರ್ ವಲಯ ಕಡಿಮೆಯಾದರೆ ಕೆರೆ ಅಂಗಳದ ಒತ್ತುವರಿ ಹೆಚ್ಚಾಗುತ್ತದೆ. ಹೀಗಾಗಿ ಕೆರೆಗಳ ಬಫರ್‌ ವಲಯ ಕಡಿತದ ಮಸೂದೆಗೆ ಸಮ್ಮತಿ ನೀಡಬಾರದು’ ಎಂದು ವೈಜ್ಞಾನಿಕ ಅಧ್ಯಯನಗಳ ವರದಿಯೊಂದಿಗೆ ‘ಬೆಂಗಳೂರು ಟೌನ್‌ಹಾಲ್‌’ ಸದಸ್ಯರು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.