ADVERTISEMENT

500 ಆಸನಗಳ ರಂಗಮಂದಿರ ನಿರ್ಮಿಸಿ: ಸರ್ಕಾರಕ್ಕೆ ರಂಗಕರ್ಮಿ ಬಿ.ಜಯಶ್ರೀ ಮನವಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 16:21 IST
Last Updated 6 ಫೆಬ್ರುವರಿ 2025, 16:21 IST
<div class="paragraphs"><p>ನಾಟಕೋತ್ಸವದಲ್ಲಿ ಬಿ. ಜಯಶ್ರೀ ಅವರಿಗೆ ಉತ್ಸವದ ಗೌರವ ಸಮರ್ಪಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ&nbsp;ಜಿಪಿಓ ಚಂದ್ರು, ಜಗದೀಶ್ ಜಾಲ, ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಬಿ.ವಿ. ರಾಜಾರಾಮ್. ಪ್ರೊ. ಬನ್ನಟ್ಟಿ, ರಂಗಕರ್ಮಿ ಬಿ. ಸುರೇಶ್, ನಾಗೇಶ್ ಬೆಟ್ಟಕೋಟೆ, ಅಕಾಡೆಮಿ ರಿಜಿಸ್ಟ್ರಾರ್ ನಿರ್ಮಲಾ ಮಠಪತಿ  ಉಪಸ್ಥಿತರಿದ್ದರು.</p></div>

ನಾಟಕೋತ್ಸವದಲ್ಲಿ ಬಿ. ಜಯಶ್ರೀ ಅವರಿಗೆ ಉತ್ಸವದ ಗೌರವ ಸಮರ್ಪಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜಿಪಿಓ ಚಂದ್ರು, ಜಗದೀಶ್ ಜಾಲ, ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಬಿ.ವಿ. ರಾಜಾರಾಮ್. ಪ್ರೊ. ಬನ್ನಟ್ಟಿ, ರಂಗಕರ್ಮಿ ಬಿ. ಸುರೇಶ್, ನಾಗೇಶ್ ಬೆಟ್ಟಕೋಟೆ, ಅಕಾಡೆಮಿ ರಿಜಿಸ್ಟ್ರಾರ್ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.

   

ಬೆಂಗಳೂರು: ‘ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 500 ಆಸನಗಳ ಸುಸಜ್ಜಿತ ರಂಗಮಂದಿರ ನಿರ್ಮಿಸಿ, ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಬಿ. ಜಯಶ್ರೀ ಅವರು ಸರ್ಕಾರಕ್ಕೆ ಮನವಿ ಮಾಡಿದರು. 

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಉತ್ಸವ ಗೌರವ ಸ್ವೀಕರಿಸಿ, ಮಾತನಾಡಿದರು. 

ADVERTISEMENT

‘ರಾಷ್ಟ್ರೀಯ ರಂಗಭೂಮಿಗೆ ಸಮಾನವಾಗಿ ಕನ್ನಡ ರಂಗಭೂಮಿ ಬೆಳೆದಿದೆ. ಆದ್ದರಿಂದ ಕಲಾಗ್ರಾಮದಲ್ಲಿ ಕೇವಲ 250 ಆಸನಗಳ ಸಭಾಂಗಣವು ರಂಗ ಪ್ರದರ್ಶನಗಳಿಗೆ ಸಾಕಾಗುವುದಿಲ್ಲ. ಇಲ್ಲಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಸುಸಜ್ಜಿತ ರಂಗಮಂದಿರವನ್ನು ಸರ್ಕಾರ ನಿರ್ಮಿಸಬೇಕು’ ಎಂದು ಹೇಳಿದರು. 

‘ಭಾರತ ರಂಗ ಮಹೋತ್ಸವದಂತಹ ಉತ್ಸವದಿಂದ ಭಾವೈಕ್ಯ ಸಾಧ್ಯ. ಸರ್ಕಾರ ಇಂತಹ ಉತ್ಸವಗಳನ್ನು ಹೆಚ್ಚು ಆಯೋಜಿಸಬೇಕು. ರಂಗ ಪರಿಷೆಯನ್ನು ಪ್ರತಿ ವರ್ಷ 15 ದಿನಗಳು ನಡೆಸಬೇಕು. ಇಲ್ಲಿನ ರಂಗಭೂಮಿ ವೈವಿಧ್ಯಮಯ ಪ್ರಯೋಗಗಳಿಗೆ ತೆರೆದುಕೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುವರ್ಣ ಮಹೋತ್ಸವ ಗೌರವ ಸ್ವೀಕರಿಸಿದ ಕಲಾಗಂಗೋತ್ರಿ ತಂಡದ ಮುಖ್ಯಸ್ಥ ಬಿ.ವಿ. ರಾಜಾರಾಮ್, ‘ನಾಟಕ ಅಕಾಡೆಮಿಯು ರಂಗ ತಂಡಗಳನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸ್ತುತ್ಯರ್ಹ. ಈ ಮೂಲಕ ಇಡೀ ರಂಗಭೂಮಿ ಒಗ್ಗಟ್ಟಾಗಿದೆ ಎಂಬ ಸಂದೇಶ ಸಾರಿದಂತಾಗಿದೆ’ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ರಂಗಭೂಮಿಯಲ್ಲಿ 50 ವರ್ಷಗಳು ಪೂರೈಸಿದ ಬೆಂಗಳೂರಿನ ರಂಗ ತಂಡಗಳನ್ನು ಈ ವರ್ಷ ಅಭಿನಂದಿಸಿದ್ದೇವೆ. ಮುಂದಿನ ವರ್ಷದಿಂದ ಈ ಉತ್ಸವದಲ್ಲಿ ಜಿಲ್ಲೆಗಳಲ್ಲಿನ ರಂಗ ತಂಡಗಳನ್ನು ಗೌರವಿಸಲಾಗುವುದು. ಕರ್ನಾಟಕ ಜಾನಪದ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿಯೂ ಈ ಉತ್ಸವಕ್ಕೆ ಸಹಯೋಗ ನೀಡಿದಲ್ಲಿ ಸಾಂಸ್ಕೃತಿಕ ಜಗತ್ತನ್ನೇ ಕಲಾಗ್ರಾಮದಲ್ಲಿ ಅನಾವರಣ ಮಾಡಲು ಸಾಧ್ಯ. ಕಲಾಗ್ರಾಮವು ಸ್ಮಶಾನವಾಗದೆ, ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಬೇಕು’ ಎಂದು ಹೇಳಿದರು. 

ಬಳಿಕ ಹೈದರಾಬಾದ್‌ನ ನಿಭಾ ಥಿಯೇಟರ್ ಎನ್ಸೇಂಬಲ್ ತಂಡ ಪ್ರಸ್ತುತ ಪಡಿಸಿದ ‘ಪಾಕುಡುರಾಲ್ಲು’ ತೆಲುಗು ನಾಟಕ ಪ್ರದರ್ಶನವಾಯಿತು. ಇದನ್ನು ನಾಜರಿನ್ ಇಷಾಕ್ ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.