ADVERTISEMENT

ರಾಮಮಂದಿರದಂತೆ ರಾಮರಾಜ್ಯ ನಿರ್ಮಿಸಿ: ನಿಡುಮಾಮಿಡಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 15:23 IST
Last Updated 30 ಡಿಸೆಂಬರ್ 2023, 15:23 IST
<div class="paragraphs"><p>ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ‘ಹೋರಾಟಕ್ಕೆ ಸಾವಿಲ್ಲ’ ಮತ್ತು ‘ಓಲೆ ಒಳದನಿ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು</p></div>

ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ‘ಹೋರಾಟಕ್ಕೆ ಸಾವಿಲ್ಲ’ ಮತ್ತು ‘ಓಲೆ ಒಳದನಿ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು

   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಿಸಿದ ರೀತಿಯಲ್ಲಿ ರಾಮನ ತತ್ವಗಳನ್ನೂ ಪಾಲಿಸಿ, ರಾಮರಾಜ್ಯವನ್ನು ನಿರ್ಮಾಣ ಮಾಡಲಿ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಆಶಯ ವ್ಯಕ್ತ‍ಪಡಿಸಿದರು.

ನಿಡುಮಾಮಿಡಿ ಮಠ ನಗರದಲ್ಲಿ ಶನಿವಾರ ಹಮ್ಮಿಕೊಂಡ ಜಚನಿ (ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ) ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ, ಮಾತನಾಡಿದರು. 

ADVERTISEMENT

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದು ಶ್ರೇಷ್ಠವಾದ ಕೆಲಸ. ಕೋಟ್ಯಂತರ ಜನರ ಹೃದಯದಲ್ಲಿ ರಾಮ ಇದ್ದಾನೆ. ಗಾಂಧೀಜಿ ಅವರ ರಾಮ ಅಯೋಧ್ಯೆಯ ರಾಮನಾಗಿರದೆ, ಆತ್ಮಾರಾಮ ಆಗಿದ್ದಾನೆ. ನಾವು ರಾಮನನ್ನು ಆರಾಧಿಸಿದಷ್ಟೇ ರಾಮನ ತತ್ವಗಳನ್ನೂ ಪಾಲಿಸಬೇಕು’ ಎಂದು ಹೇಳಿದರು.  

‘ಅಸ್ಪೃಶ್ಯತೆ ಹೋಗದಿದ್ದರೆ ಹಿಂದೂ ಧರ್ಮ, ಲಿಂಗಾಯತ ಧರ್ಮ ಉದ್ಧಾರ ಆಗುವುದಿಲ್ಲ. ಅಸ್ಪೃಶ್ಯತೆಯನ್ನು ಬಿಟ್ಟು, ಮನುಷ್ಯ ಧರ್ಮವನ್ನು ಪಾಲಿಸಬೇಕು. ವೀರಶೈವ ಲಿಂಗಾಯತ ಸಮುದಾಯದ ಮಠಗಳಲ್ಲಿ ಅಸ್ಪೃಶ್ಯತೆಯ ಆಚರಣೆಗೆ ಅವಕಾಶ ನೀಡಬಾರದು. ಈ ಬಗ್ಗೆ ವೀರಶೈವ ಮಹಾಸಭಾ ಕ್ರಮವಹಿಸಲಿ’ ಎಂದು ತಿಳಿಸಿದರು. 

ಮಠಗಳಿಂದ ಉಳಿದ ಸಂಸ್ಕೃತಿ: ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ‘ಭವ್ಯ ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಮಠಗಳು ಮಾಡುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಅನ್ನ, ಆರೋಗ್ಯ, ಶಿಕ್ಷಣ ದಾಸೋಹದ ಮೂಲಕ ಬಡವರ ಬದುಕಿಗೆ ಆಶ್ರಯ ನೀಡುತ್ತಿವೆ. ನಿಡುಮಾಮಿಡಿ ಮಠವೂ ವಿದ್ಯಾಸಂಸ್ಥೆಗಳ ಮೂಲಕ ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶೈಕ್ಷಣಿಕ ಅವಶ್ಯಕತೆಯನ್ನು ಪೂರೈಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಾಹಿತಿ ಹಂ.ಪ. ನಾಗರಾಜಯ್ಯ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ. ಪರಮಶಿವಮೂರ್ತಿ ಅವರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಕೊಡುಗೆಗಳ ಬಗ್ಗೆ ಮಾತನಾಡಿದರು. 

‘ರಾಜಧರ್ಮ ಪಾಲಿಸಿದ ಯಡಿಯೂರಪ್ಪ’

‘ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಯಡಿಯೂರಪ್ಪ ಅವರ ಮಾರ್ಗದರ್ಶನವನ್ನು ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರದ ವರಿಷ್ಠರು ಪಡೆದುಕೊಳ್ಳಬೇಕು. ಅವರ ಪಕ್ಷದ ಸೈದ್ಧಾಂತಿಕ ವಿಚಾರಗಳನ್ನು ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಅವರಿಗೆ ಅನ್ಯಾಯ ಆದಾಗ ನನಗೂ ಅವರ ಬಗ್ಗೆ ಸಹಾನುಭೂತಿ ಮೂಡಿತು. ಅವರು ರಾಜಧರ್ಮ ಪಾಲಿಸಿದ ನಾಯಕ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಒಂದೇ ಒಂದು ಕೊಮುಗಲಭೆ ನಡೆದಿಲ್ಲ’ ಎಂದು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. 

Cut-off box - ‘ಸಮಾಜದಲ್ಲಿ ಅಸಮಾನತೆ ತೊಲಗಲಿ’  ನಿಡುಮಾಮಿಡಿ ಶ್ರೀ ಪೀಠಾರೋಹಣ 33 ಕಾರ್ಯಕ್ರಮದಲ್ಲಿ ‘ಹೋರಾಟಕ್ಕೆ ಸಾವಿಲ್ಲ’ ಮತ್ತು ‘ಓಲೆ ಒಳದನಿ’ ಕೃತಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸಮಾಜದಲ್ಲಿನ ವೈರುಧ್ಯಗಳು ಜಾತೀಯತೆ ಅಸಮಾನತೆಗಳು ತೊಲಗಬೇಕು. ಆಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ. ಮನುಷ್ಯನ ಸ್ವಾರ್ಥದಿಂದ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ’ ಎಂದು ಹೇಳಿದರು.  ‘ನಿಡುಮಾಮಿಡಿ ಮಠವು ಧಾರ್ಮಿಕ ಚಟುವಟಿಕೆಗಳ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಮಾನವ ಧರ್ಮ ಸ್ಥಾಪಿಸುವ ಮಠದ ಗುರಿ ಈಡೇರಿಕೆಗೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.