ADVERTISEMENT

ನಿರ್ಮಾಣದ ಹಂತದ ಕಟ್ಟಡ ಕುಸಿತ: ಇಬ್ಬರು ಸಾವು, 8 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 4:55 IST
Last Updated 5 ಏಪ್ರಿಲ್ 2019, 4:55 IST
   

ಬೆಂಗಳೂರು: ಧಾರವಾಡದ ಕಟ್ಟಡ ಕುಸಿತದ ದುರ್ಘಟನೆಯ ಕಹಿ ಮಾಸುವ ಮುನ್ನವೇ ಬೆಂಗಳೂರಿನ ಯಶವಂತಪುರದ ಎಪಿಎಂಸಿಯಲ್ಲಿನ ನಿರ್ಮಾಣ ಹಂತದ ಕಟ್ಟಡ ಕುಸಿದು, ಇಬ್ಬರು ಮೃತಪಟ್ಟಿದ್ದಾರೆ.

ಬೆಳಿಗ್ಗೆ 4.30ರ ವೇಳೆಗೆ ಕಟ್ಟಡಕ್ಕೆ ಹಾಕಿದ್ದ ಸೆಂಟ್ರಿಂಗ್‌ಕುಸಿದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಮಿಕರಾದ ಬಿಹಾರ ಮೂಲಕ ರಾಕೇಶ್‌ ಹಾಗೂ ರಾಹುಲ್‌ ಎಂಬುವವರು ಮೃತಪಟ್ಟಿದ್ದಾರೆ. ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರು ಮತ್ತು ಗಾಯಗೊಂಡ ಕಾರ್ಮಿಕರನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಹಾಗೂ ಕಣ್ವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು,ಅಗ್ನಿಶಾಮಕ ಸಿಬ್ಬಂದಿಸ್ಥಳಕ್ಕೆಬಂದಿದ್ದು, ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅವಶೇಷಗಳ ಅಡಿ ಯಾವ ಕಾರ್ಮಿಕರು ಸಿಲುಕಿಲ್ಲ ಎಂದು ತಿಳಿದು ಬಂದಿದೆ.

ವಾಹನ ನಿಲುಗಡೆ ಪ್ರದೇಶ ನಿರ್ಮಾಣಕ್ಕೆ ಎಪಿಎಂಸಿ ಖಾಸಗಿ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿತ್ತು. ಕೆಳ ಹಾಗೂ ಮೊದಲನೆಅಂತಸ್ತು ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಎರಡನೇ ಮಹಡಿಗೆ ಕಾಂಕ್ರೀಟ್ ಹಾಕುವ ಕೆಲಸ ನಡೆಯುತ್ತಿತ್ತು. ಈ ವೇಳೆ ಸೆಂಟ್ರಿಂಗ್ ಕುಸಿದು ಬಿದ್ದಿದೆ.

‘ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆಯದಿದ್ದರಿಂದ ಇದೇ ಜನವರಿಯಲ್ಲಿಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿದ್ದೆವು. ಆಯೋಗದ ಮುಂದೆ ಹಾಜರಾಗುವಂತೆ ಈಗಾಗಲೇ ಐದಾರು ಬಾರಿ ನೋಟಿಸ್‌ ನೀಡಿದ್ದೇವೆ’ ಎಂದುಕಾರ್ಮಿಕ ಇಲಾಖೆ ಉಪ ಆಯುಕ್ತ ರೇವಣ್ಣ ತಿಳಿಸಿದರು.

‘ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇನ್ನು ಯಾರು ಅವಶೇಷಗಳ ಅಡಿ ಸಿಲುಕಿಲ್ಲ. ಸುಮಾರು 70 ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದೆ. 12 ಕಾರ್ಮಿಕರು ಕಟ್ಟಡದ ಬಳಿಯೇ ವಾಸವಾಗಿದ್ದಾರೆ. ಇವರಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ’ ಡಿಜಿಪಿ ಎಂ.ಎನ್‌. ರೆಡ್ಡಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.