ADVERTISEMENT

ಬೆಂಗಳೂರು | ಕಣ್ಣೆದುರೇ ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡ

ಗಾಂಧಿನಗರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 21:55 IST
Last Updated 28 ಜುಲೈ 2020, 21:55 IST
ಕುಸಿದು ಬಿದ್ದ ಕಟ್ಟಡ
ಕುಸಿದು ಬಿದ್ದ ಕಟ್ಟಡ   

ಬೆಂಗಳೂರು: ಗಾಂಧಿನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಸ್ಥಳೀಯರ ಕಣ್ಣೆದುರೇ ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ.

ಅದೃಷ್ಟವಶಾತ್ ಯಾವುದೇ ಸಾವು–ನೋವು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಉಪ್ಪಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಆನಂದ್ ರಾವ್ ವೃತ್ತಕ್ಕೆ ಹೊಂದಿಕೊಂಡಿರುವ ಸುಬೇದಾರ್‌ ಛತ್ರಂ ರಸ್ತೆಯಲ್ಲಿದ್ದ ಕಪಾಲಿ ಚಿತ್ರಮಂದಿರದ ಕೆಲಭಾಗವನ್ನು ನೆಲಸಮ ಮಾಡಲಾಗಿದೆ. ಅದೇ ಜಾಗದಲ್ಲೇ ಶಾಪಿಂಗ್ ಮಾಲ್, ಲಾಡ್ಜ್‌ ಹಾಗೂ ಮಳಿಗೆಗಳ ಕಟ್ಟಡ ನಿರ್ಮಿಸುವ ಕೆಲಸ ಶುರುವಾಗಿದೆ.

ADVERTISEMENT

ಚಿತ್ರಮಂದಿರದ ಜಾಗಕ್ಕೆ ಹೊಂದಿಕೊಂಡೇ ಉದ್ಯಮಿಯೊಬ್ಬರು ಲಾಡ್ಜ್‌ಗೆಂದು ಮೂರು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದರು. ಕಾಮಗಾರಿ ಅಂತಿಮ ಹಂತದಲ್ಲಿತ್ತು. ಇತ್ತೀಚೆಗೆ ಪಾಯದಲ್ಲಿ ಸಡಿಲಿಕೆ ಕಂಡುಬಂದಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕಟ್ಟಡವನ್ನು ನೆಲಸಮ ಮಾಡಿ, ಹೊಸದಾಗಿ ಕಟ್ಟಡ ನಿರ್ಮಿಸಲು ಯೋಚಿಸಲಾಗಿತ್ತು.

ಅದರ ನಡುವೆಯೇ ಮಂಗಳವಾರ ರಾತ್ರಿ 9.15ರ ಸುಮಾರಿಗೆ ಕಟ್ಟಡ ನೆಲಕ್ಕುರುಳಿದ್ದು, ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

‘ಚಿತ್ರಮಂದಿರ ಜಾಗದಲ್ಲಿ ಕಟ್ಟಡ ನಿರ್ಮಿಸಲು ಆಳವಾಗಿ ಪಾಯ ತೆಗೆಯಲಾಗಿದೆ. ಇದರಿಂದ ಪಕ್ಕದ ಜಾಗದಲ್ಲಿ ನಿರ್ಮಿಸುತ್ತಿದ್ದ ಕಟ್ಟಡದ ಪಾಯಕ್ಕೂ ಧಕ್ಕೆ ಆಗಿದೆ. ಇದರಿಂದಲೇ ಕಟ್ಟಡ ಕುಸಿದು ಬಿದ್ದಿದೆ. ಘಟನೆ ಸಂಬಂಧ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ. ಕಟ್ಟಡದ ಮಾಲೀಕರನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.