ADVERTISEMENT

ನಿರ್ಮಾಣ ಹಂತದ ಕಟ್ಟಡ: ಬಿಡಿಎ ನೋಟಿಸ್

ನಾಡಪ್ರಭು ಕೆಂಪೇಗೌಡ ಬಡಾವಣೆ ವಿಸ್ತರಣೆ ಭಾಗವಾಗಿ ಬಿಡಿಎ ಕ್ರಮ

ಕೆ.ಎಸ್.ಸುನಿಲ್
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
ಬಿಡಿಎ
ಬಿಡಿಎ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ವಿಸ್ತರಣೆಗಾಗಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಗುರುತಿಸಿರುವ ಕೆಂಗೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಬೆಂಗಳೂರು ಅಭಿವೃದ್ಧಿ ‌ಪ್ರಾಧಿಕಾರ (ಬಿಡಿಎ) ನೋಟಿಸ್ ಜಾರಿ ಮಾಡಿದೆ.

‘ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ಇನ್ನೂ ಹೊರಡಿಸಿಲ್ಲ. ಆದರೂ, ಈ ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಆಸ್ತಿ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಂಪೇಗೌಡ ಬಡಾವಣೆಯ ಎರಡನೇ ಹಂತಕ್ಕೆ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಹಾಗೂ ನೈಸ್ ರಸ್ತೆಯ ಹೊರಗಿನ 17 ಗ್ರಾಮಗಳ ವ್ಯಾಪ್ತಿಯಲ್ಲಿರುವ ಅಂದಾಜು 9 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.

ADVERTISEMENT

ಪ್ರಾಧಿಕಾರದ ಎಂಜಿನಿಯರ್‌ಗಳು ಈ ಗ್ರಾಮಗಳಿಗೆ ನಿತ್ಯ ಭೇಟಿ ನೀಡಿ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ‌ಗುರುತಿಸಿ, ಸಂಬಂಧಪಟ್ಟ ಮಾಲೀಕರಿಗೆ ತಕ್ಷಣವೇ ಕೆಲಸ ನಿಲ್ಲಿಸು
ವಂತೆ ಸೂಚಿಸುತ್ತಿದ್ದಾರೆ. ಇಲ್ಲವಾದರೆ ಕಟ್ಟಡ ನೆಲಸಮ ಮಾಡಲಾಗುವುದು ಎಂದು ಎಚ್ಚರಿಕೆ ನೋಟಿಸ್ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಕೋಲೂರು ಗ್ರಾಮದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಂ. 4ನೇ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

‘ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ ಅನ್ವಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯ ಯೋಜನಾ ಪ್ರಾಧಿಕಾರವಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಬಡಾವಣೆ ಅಥವಾ ಕಟ್ಟಡ ಅಭಿವೃದ್ಧಿಪಡಿಸಬೇಕಾದಲ್ಲಿ ಬಿಡಿಎ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯ. ಯಾವುದೇ ಉಲ್ಲಂಘನೆಯನ್ನು ಕಾನೂನು
ಬಾಹಿರವೆಂದು ಪರಿಗಣಿಸುವುದಲ್ಲದೆ, ಕಾನೂನು ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆದಿರುವ ದಾಖಲಾತಿಗಳನ್ನು ಏಳು ದಿನ
ದೊಳಗೆ ಸಲ್ಲಿಸುವಂತೆ ಆಸ್ತಿ ಮಾಲೀಕರಿಗೆ ಸೂಚಿಸಲಾಗಿದೆ. ಇಲ್ಲವಾದರೆ ನಿಯಮ ಉಲ್ಲಂಘನೆ ಕಾರಣಕ್ಕೆ ಕಟ್ಟಡ ನೆಲಸಮಗೊಳಿಸಲಾಗುವುದು. ಅಲ್ಲದೇ ಕಾನೂನು ಉಲ್ಲಂಘಿಸಿ ಬಡಾವಣೆ ನಿರ್ಮಿಸಿದವರ ವಿರುದ್ಧ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 73ರಂತೆ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಲಾಗಿದೆ.

ಗ್ರಾಮಗಳಿಗೆ ಎಂಜಿನಿಯರ್‌ಗಳ ಭೇಟಿ ನೋಟಿಸ್‌ಗೆ ಆಸ್ತಿ ಮಾಲೀಕರ ಆಕ್ಷೇ‍ಪ ಕೆಲಸ ನಿಲ್ಲಿಸಲು ಅಧಿಕಾರಿಗಳ ಸೂಚನೆ

‘ಮಾಹಿತಿಯೇ ಇಲ್ಲ’ ‘ನಾಡಪ್ರಭು ಕೆಂಪೇಗೌಡ ಬಡಾವಣೆ ವಿಸ್ತರಣೆ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿಲ್ಲ. ಆದರೂ ನಿರ್ಮಾಣ ಹಂತದ ಕಟ್ಟಡಗಳಿಗೆ ನೋಟಿಸ್ ನೀಡಲಾಗುತ್ತಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ. ‘ನೋಟಿಸ್‌ನಿಂದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮತ್ತು ಹೊಸದಾಗಿ ನಿರ್ಮಿಸಿರುವ ಮನೆಗಳ ಮಾಲೀಕರು ಆತಂಕಗೊಂಡಿದ್ದಾರೆ’ ಎಂದರು.

ಗ್ರಾಮಗಳಿಗೆ ಎಂಜಿನಿಯರ್‌ಗಳ ಭೇಟಿ

ನೋಟಿಸ್‌ಗೆ ಆಸ್ತಿ ಮಾಲೀಕರ ಆಕ್ಷೇ‍ಪ

ಕೆಲಸ ನಿಲ್ಲಿಸಲು ಅಧಿಕಾರಿಗಳ ಸೂಚನೆ

‘ಮಾಹಿತಿಯೇ ಇಲ್ಲ’

‘ನಾಡಪ್ರಭು ಕೆಂಪೇಗೌಡ ಬಡಾವಣೆ ವಿಸ್ತರಣೆ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿಲ್ಲ. ಆದರೂ ನಿರ್ಮಾಣ ಹಂತದ ಕಟ್ಟಡಗಳಿಗೆ ನೋಟಿಸ್ ನೀಡಲಾಗುತ್ತಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ನೋಟಿಸ್‌ನಿಂದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮತ್ತು ಹೊಸದಾಗಿ ನಿರ್ಮಿಸಿರುವ ಮನೆಗಳ ಮಾಲೀಕರು ಆತಂಕಗೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.