ADVERTISEMENT

ಬಸ್‌ ನಿಲ್ಲಿಸುವ ಜಾಗದಲ್ಲಿ ಆಟೊಗಳದ್ದೇ ಕಾರುಬಾರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:14 IST
Last Updated 7 ಅಕ್ಟೋಬರ್ 2018, 19:14 IST
ನಾಯಂಡಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಬಸ್‌ ನಿಲ್ಲಿಸಲು ನಿಗದಿಪಡಿರುವ ಜಾಗದಲ್ಲಿ ಆಟೊಗಳನ್ನು ನಿಲ್ಲಿಸಿರುವುದು
ನಾಯಂಡಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಬಸ್‌ ನಿಲ್ಲಿಸಲು ನಿಗದಿಪಡಿರುವ ಜಾಗದಲ್ಲಿ ಆಟೊಗಳನ್ನು ನಿಲ್ಲಿಸಿರುವುದು   

ಬೆಂಗಳೂರು: ನಾಯಂಡಹಳ್ಳಿ ಮೆಟ್ರೊ ನಿಲ್ದಾಣ ಬಳಿ ಬಸ್‌ ನಿಲ್ಲಿಸಲು ನಿಗದಿಪಡಿಸಿರುವ ಜಾಗವನ್ನು ಆಟೊಗಳೇ ಆಕ್ರಮಿಸಿಕೊಳ್ಳುತ್ತಿದ್ದು, ಬಸ್ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಮೈಸೂರು ರಸ್ತೆಯ ಆಸುಪಾಸಿನ ನಿವಾಸಿಗಳ ಅನುಕೂಲಕ್ಕಾಗಿ ಮೆಟ್ರೊ ನಿಲ್ದಾಣದ ಬಳಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ಜಾಗ ಮೀಸಲಿರಿಸಲಾಗಿದೆ. ಆದರೆ, ಅಲ್ಲಿ ಯಾವಾಗಲೂ ಆಟೊಗಳೇ ನಿಲ್ಲುತ್ತಿವೆ. ಪ್ರಯಾಣಿಕರು, ಆಟೊಗಳ ನಡುವೆಯೇ ನುಸುಳಿಕೊಂಡು ಸಾಗಿ ಬಸ್‌ ಹತ್ತಬೇಕಿದೆ.

‘ಮೆಟ್ರೊ ನಿಲ್ದಾಣದಿಂದ ನಿಗದಿತ ಸ್ಥಳಗಳಿಗೆ ಹೋಗಲು ಬಸ್‌ಗಳ ವ್ಯವಸ್ಥೆ ಚೆನ್ನಾಗಿದೆ. ಆದರೆ, ಬಸ್‌ಗಳಿಗೆ ಅಡ್ಡವಾಗಿ ಆಟೊಗಳೇ ನಿಂತಿರುತ್ತವೆ. ಬಸ್‌ ಹತ್ತಲು ಹೊರಟಾಗ ಆಟೊದವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.

ADVERTISEMENT

‘ಆಟೊದಲ್ಲಿ ಹೋಗೋಣ ಎಂದರೆ, ಹೆಚ್ಚಿನ ಬಾಡಿಗೆ ಕೇಳುತ್ತಾರೆ. ಬಸ್ ನಿಲ್ಲಿಸುವ ಜಾಗದಲ್ಲಿ ಆಟೊ ನಿಲ್ಲಿಸಬೇಡಿ ತೊಂದರೆ ಆಗುತ್ತದೆ ಎಂದು ಹೇಳಿದರೆ, ನಮಗೇ ಬೆದರಿಕೆ ಹಾಕುತ್ತಾರೆ. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ದೂರಿದರು.

ಆಟೊದವರ ವರ್ತನೆ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ವ್ಯಕ್ತಿಯೊಬ್ಬರು, ‘ಈ ಟ್ವೀಟ್‌ ಅನ್ನೇ ದೂರು ಎಂದು ಪರಿಗಣಿಸಿ ಆಟೊ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.