
ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿರುವ ಬಸ್ ಆದ್ಯತಾ ಪಥವನ್ನು ಮತ್ತೆ ಆರಂಭಿಸಲು ಬಿಎಂಟಿಸಿ ಚಿಂತನೆ ನಡೆಸಿದ್ದರೂ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ಯತಾ ಪಥಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ.
ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿಯ 300ಕ್ಕೂ ಅಧಿಕ ಬಸ್‌ಗಳು ಪ್ರತಿದಿನ 3,300ಕ್ಕೂ ಅಧಿಕ ಬಾರಿ ಸಂಚರಿಸುತ್ತಿವೆ. ಅರ್ಧದಷ್ಟು ಹವಾನಿಯಂತ್ರಿತ ಬಸ್‌ಗಳಾಗಿವೆ. ಅಧಿಕ ವಾಹನದಟ್ಟಣೆಯಿಂದ ಸಂಚಾರವು ನಿಧಾನವಾಗಿದ್ದು ಹೆಚ್ಚು ಇಂಧನ ಖರ್ಚಾಗುತ್ತಿದೆ. 2019ರ ನವೆಂಬರ್‌ನಲ್ಲಿ ಇದೇ ರಸ್ತೆಯಲ್ಲಿ ಕೆ.ಆರ್.ಪುರ ಮತ್ತು ಕೇಂದ್ರ ರೇಷ್ಮೆ ಮಂಡಳಿ ನಡುವೆ 17 ಕಿ.ಮೀ. ಆದ್ಯತಾ ಪಥ ಆರಂಭಿಸಲಾಗಿತ್ತು. ಆಗ ಬಸ್‌ಗಳು 15 ನಿಮಿಷ ಬೇಗ ತಲುಪುತ್ತಿದ್ದವು. ಇಂಧನವೂ ಉಳಿತಾಯವಾಗುತ್ತಿತ್ತು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗದ ಕಾಮಗಾರಿಗಾಗಿ 2022ರಲ್ಲಿ ಬಸ್ ಆದ್ಯತಾ ಪಥ ಸ್ಥಗಿತಗೊಳಿಸಲಾಯಿತು. ಈಗ, ಮೆಟ್ರೊ ನೀಲಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ನಿಲ್ದಾಣಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಆದರೂ ಆದ್ಯತಾ ಪಥಕ್ಕೆ ಆದ್ಯತೆ ಸಿಕ್ಕಿಲ್ಲ.
17 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ (ಒಆರ್‌ಆರ್) ಮತ್ತು ಸರ್ಜಾಪುರ ರಸ್ತೆಯ ಉದ್ದಕ್ಕೂ 'ಗಾತ್ರ-ಸಾಮರ್ಥ್ಯ' ಅನುಪಾತವು (ವಿ–ಸಿ.) ರಸ್ತೆ ಸಾಮರ್ಥ್ಯಕ್ಕಿಂತ ಎರಡು–ಮೂರು ಪಟ್ಟು ಹೆಚ್ಚಾಗಿದೆ ಎಂಬುದನ್ನು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ನಡೆಸಿದ ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಬೇಕಿದ್ದರೆ ಐಟಿ ಪಾರ್ಕ್ ಮತ್ತು ಇತರ ಖಾಸಗಿ ಕಂಪನಿಗಳ ಉದ್ಯೋಗಿಗಳು ಬಿಎಂಟಿಸಿ ಬಸ್‌ನಂಥ ಸಾರ್ವಜನಿಕ ಸಾರಿಗೆ ಕಡೆಗೆ ಮುಖ ಮಾಡಬೇಕು. ರಸ್ತೆಯಲ್ಲೇ ಸಮಯ ಕಳೆದು ಹೋಗುವುದನ್ನು ತಪ್ಪಿಸಬೇಕಿದ್ದರೆ ಬಸ್‌ಗಳಿಗೆ ಪ್ರತ್ಯೇಕ ಪಥ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಸ್‌ಗಳಿಗೆ ಪ್ರತ್ಯೇಕ ಪಥ ಮಾಡಬೇಕು. ಈ ಆದ್ಯತಾ ಪಥದಲ್ಲಿ ಖಾಸಗಿ ವಾಹನಗಳು ಸಂಚರಿಸದಂತೆ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಉತ್ತಮ ವೋಲ್ವೊ ಬಸ್‌ಗಳು ಸಂಚರಿಸುತ್ತಿವೆ. ಟೆಕ್ ಪಾರ್ಕ್‌ಗಳ ಕಡೆಗೂ ಇಂಥದ್ದೇ ಬಸ್‌ಗಳನ್ನು ನಿಯೋಜಿಸಬೇಕು. ಆಗ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂಬುದು ಖಾಸಗಿ ಕಂಪನಿ ಉದ್ಯೋಗಿ ರೋಶನ್ ಎನ್. ಅಭಿಪ್ರಾಯ.
‘ಹೊರವರ್ತುಲ ರಸ್ತೆಯಲ್ಲಿ ಬಸ್ ಆದ್ಯತಾ ಪಥ ಹೇಗೆ ನಿರ್ವಹಿಸುವುದು ಎಂದು ಬಿಎಂಆರ್‌ಸಿಎಲ್, ಬಿಬಿಎಂಪಿ, ಡಲ್ಟ್, ಬೆಂಗಳೂರು ಸಂಚಾರ ಪೊಲೀಸ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆ ನಡೆಸಲು ಕೆಲವು ತಿಂಗಳ ಹಿಂದೆ ಬಿಎಂಟಿಸಿ ಪತ್ರ ವ್ಯವಹಾರ ನಡೆಸಿತ್ತು. ಬೇರೆ ಯೋಜನೆಗಳಿಂದಾಗಿ ಕನಿಷ್ಠ ಒಂದು ವರ್ಷ ಆದ್ಯತಾ ಪಥ ನಿರ್ಮಾಣ ಕಷ್ಟ ಎಂಬ ಮಾಹಿತಿ ಬಂದಿದ್ದರಿಂದ ಮಾತುಕತೆ ಪ್ರಕ್ರಿಯೆ ಮುಂದುವರಿಯಲಿಲ್ಲ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ವಲ್ಪ ಸಮಯ ಹಿಡಿಯಲಿದೆ
‘ಹೊರ ವರ್ತುಲ ರಸ್ತೆಯಲ್ಲಿ ಬಸ್ ಆದ್ಯತಾ ಪಥ ಅಗತ್ಯವಿದೆ. ಆದರೆ ಇಲ್ಲಿ ವಿಶ್ವದರ್ಜೆಯ ರಸ್ತೆಯನ್ನು ನಿರ್ಮಿಸುವ ಯೋಜನೆಯನ್ನು ಜಿಬಿಎ ಹಾಕಿಕೊಂಡಿದೆ ಎಂಬ ಮಾಹಿತಿ ಬಂದಿದೆ. ಈ ಯೋಜನೆ ಜಾರಿಯಾಗುವಾಗ ಆದ್ಯತಾ ಪಥವೂ ಇರಲಿದೆ. ಇದಕ್ಕಾಗಿ ಸ್ವಲ್ಪ ಸಮಯ ಹಿಡಿಯಲಿದೆ’ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.
ಆದ್ಯತಾ ಪಥವೇ ಪರಿಹಾರ
ಹೊರ ವರ್ತುಲ ರಸ್ತೆಯಲ್ಲಿ ವಾಹನದಟ್ಟಣೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಹೆಚ್ಚು ಆಯ್ಕೆಗಳಿಲ್ಲ. ಮೆಟ್ರೊದಲ್ಲಿ ಸಂಚರಿಸುವುದು ಬಸ್‌ಗಳಿಗೆ ಪ್ರತ್ಯೇಕ ಪಥ ನಿರ್ಮಿಸುವುದು ಎರಡೇ ಪರಿಹಾರ. ಮೆಟ್ರೊ ನೀಲಿ ಮಾರ್ಗದಲ್ಲಿ ರೈಲು ಸಂಚರಿಸಲು ಇನ್ನೂ ಒಂದೂವರೆ ವರ್ಷ ಬೇಕಾಗುತ್ತದೆ. ಕೆ.ಆರ್.ಪುರದಲ್ಲಿ ನೇರಳೆ ಮೆಟ್ರೊ ಸೆಂಟ್ರಲ್ ಸಿಲ್ಕ್ ಬೋರ್ಡಿನಲ್ಲಿ ಹಳದಿ ಮೆಟ್ರೊ ಈಗಾಗಲೇ ಇದೆ. ಬಸ್ ಆದ್ಯತಾ ಪಥ ಇದ್ದರೆ ಉದ್ಯೋಗಿಗಳು ಸಾರ್ವಜನಿಕರು ಮೆಟ್ರೊದಲ್ಲಿ ಬಂದು ಬಸ್‌ಗಳಲ್ಲಿ ಸಂಚರಿಸಲಿದ್ದಾರೆ ಎಂದು ನಾಗರಿಕ ಕಾರ್ಯಕರ್ತ ಶ್ರೀನಿವಾಸ ಅಲವಿಳ್ಳಿ ವಿಶ್ವಾಸ ವ್ಯಕ್ತಪಡಿಸಿದರು. ಸುಮಾರು 30 ಕಾರುಗಳಲ್ಲಿ ಸಂಚರಿಸುವವರು ಒಂದೇ ಬಸ್‌ನಲ್ಲಿ ಪ್ರಯಾಣಿಸಲು ಸಾಧ್ಯ. ಆಗ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ. ಬಸ್ ಆದ್ಯತಾ ಪಥ ಮಾಡಿದರೆ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಶೇ 15ರಿಂದ ಶೇ 20ರಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.