ADVERTISEMENT

ಉದ್ಯಮಿ ಸುಲಿಗೆ: ‘ಬೇಕರಿ’ ರಘು ಸೆರೆ

ಚಾಕು ತೋರಿಸಿ ₹ 2.96 ಲಕ್ಷ ವರ್ಗಾಯಿಸಿಕೊಂಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 0:00 IST
Last Updated 27 ನವೆಂಬರ್ 2025, 0:00 IST
‘ಬೇಕರಿ’ ರಘು
‘ಬೇಕರಿ’ ರಘು   

ಬೆಂಗಳೂರು: ಉದ್ಯಮಿಯನ್ನು ಅಪಹರಿಸಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಬೇಕರಿ ರಘು ಎಂಬಾತನನ್ನು ಸಿಸಿಬಿಯ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಎಚ್.ವಿ. ಮನೋಜ್ ಅವರನ್ನು ಅಪಹರಿಸಿ ಬೆದರಿಸಿದ್ದ ಆರೋಪದ ಅಡಿ ಆಗಸ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು, ರಾಜೇಶ್, ಸೀನಾ ಅಲಿಯಾಸ್ ‘ಬಾಂಬೆ’ ಸೀನ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ತನಿಖೆಯಲ್ಲಿ ‘ಬೇಕರಿ’ ರಘು ಕೈವಾಡ ಇರುವುದು ಕಂಡು ಬಂದಿತ್ತು. ತಲೆಮರೆಸಿಕೊಂಡಿದ್ದ ಆತನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತಿತ್ತು. ಖಚಿತ ಮಾಹಿತಿ ಆಧರಿಸಿ ಮಂಡ್ಯದಲ್ಲಿ ‘ಬೇಕರಿ’ ರಘುನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಂಡ್ಯದಲ್ಲಿ ಪೊಲೀಸರ ಕಾರ್ಯಾಚರಣೆಗೆ ಮಹಿಳೆಯೊಬ್ಬರು ಅಡ್ಡಿಪಡಿಸಿದ್ದರು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಮನೋಜ್ ಕುಮಾರ್‌ ಅವರಿಗೆ ಆರೋಪಿ ರಾಜೇಶ್‌ ಪರಿಚಿತನಾಗಿದ್ದ. ಮನೋಜ್‌ ಅವರಿಂದ ಸಿನಿಮಾ ನಿರ್ದೇಶಕರೊಬ್ಬರಿಗೆ ₹1.20 ಲಕ್ಷ ಸಾಲ ಕೊಡಿಸಿದ್ದ. ಆದರೆ, ವರ್ಷ ಕಳೆದರೂ ಹಣವನ್ನು ನಿರ್ದೇಶಕ ವಾಪಸ್ ನೀಡಿರಲಿಲ್ಲ. ಸಾಲ ವಾಪಸ್‌ ಕೊಡಿಸುವಂತೆ ರಾಜೇಶ್ ಮೇಲೆ ಮನೋಜ್ ಒತ್ತಡ ಹೇರಿದ್ದರು. ಆಗಸ್ಟ್ 26ರಂದು ಸಂಜೆ 6.30ಕ್ಕೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಗೆ ಮನೋಜ್‌ ಕುಮಾರ್ ಅವರನ್ನು ರಾಜೇಶ್ ಕರೆಸಿಕೊಂಡಿದ್ದ. ಬಳಿಕ, ದೊಡ್ಡವರು ಹಣ ಕೊಡುತ್ತಾರೆ ಎಂದು ಕಾರಿಗೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಮಾರ್ಗ ಮಧ್ಯೆ ಮತ್ತೊಂದು ಕಾರಿನಲ್ಲಿ ಉದ್ಯಮಿಯನ್ನು ಕೂರಿಸಿಕೊಂಡು ಆರೋಪಿಗಳು ಅಪಹರಿಸಿದ್ದರು’ ಎಂದು ಎಂದು ಪೊಲೀಸರು ಹೇಳಿದರು.

ನಗರದ ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು ಬಳಿಕ ಚಾಕು ತೋರಿಸಿ, ಬೆದರಿಸಿ ಎರಡು ಖಾತೆಗಳಿಂದ ₹2.96 ಲಕ್ಷ ವರ್ಗಾಯಿಸಿಕೊಂಡಿದ್ದರು. ಬಳಿಕ, ₹10 ಲಕ್ಷ ಕೊಡುವಂತೆ ಬೆದರಿಸಿದ್ದರು. ಹಣ ನೀಡುವುದಾಗಿ ಮನೋಜ್ ಕುಮಾರ್ ಅವರು ಒಪ್ಪಿಕೊಂಡಿದ್ದರಿಂದ ಮರು ದಿನ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್‌ ಬಳಿ ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು. ಬಳಿಕ ಉದ್ಯಮಿ ದೂರು ನೀಡಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.

ರಘು ವಿರುದ್ಧ ನಗರದ 10 ಠಾಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.