ADVERTISEMENT

ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

5 ನಗರ ಪಾಲಿಕೆಗಳಲ್ಲಿ ಆಸ್ತಿ ಸಂಗ್ರಹದಲ್ಲಿ ಕೊರತೆ; ಮಾರ್ಚ್‌ ಅಂತ್ಯಕ್ಕೆ ₹382.72 ಕೋಟಿ ವರ್ಗಾಹಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ಕರೀಗೌಡ
ಕರೀಗೌಡ   

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ತೆರಿಗೆ ಸಂಗ್ರಹ ಹಾಗೂ ಸಂಪನ್ಮೂಲ ಕೊರತೆಯಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಅನುದಾನದಲ್ಲಿ ₹244.65 ಕೋಟಿಗೆ ಕತ್ತರಿ ಬಿದ್ದಿದೆ.

ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಮಂಡಿಸಲಾದ 2025–26ನೇ ಸಾಲಿನ ಬಜೆಟ್‌ನಲ್ಲಿ, ಘನತ್ಯಾಜ್ಯ ಸಂಗ್ರಹ, ಸಾಗಣೆಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಶೇ 16ರಷ್ಟು ಮೊತ್ತ ಕಡಿತವಾಗಿದೆ. ಬಿಬಿಎಂಪಿ ಇದ್ದಾಗ ಅನುದಾನ ಸರಿಯಾಗಿ ಪಾವತಿಯಾಗಿತ್ತು. ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಾಗಿನಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ಅನುದಾನ ವರ್ಗಾವಣೆ ಆಗಿಲ್ಲ.

ಐದು ನಗರ ಪಾಲಿಕೆಗಳಿಂದ ಬಿಎಸ್‌ಡಬ್ಲ್ಯುಎಂಎಲ್‌ ನೀಡಬೇಕಾಗಿರುವ ಹಣವನ್ನು ಈವರೆಗೆ ಪಾವತಿಸಿಲ್ಲವಾದ್ದರಿಂದ, ಜಿಬಿಎಯ ಕೆನರಾ ಬ್ಯಾಂಕ್‌ನಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ತೆರೆಯಲಾಗಿರುವ ಖಾತೆಯಿಂದ ₹100 ಕೋಟಿಯನ್ನು ಐದು ನಗರ ಪಾಲಿಕೆಗಳಿಗೆ ವರ್ಗಾಯಿಸಿ, ಐದು ನಗರ ಪಾಲಿಕೆಗಳಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ತಕ್ಷಣವೇ ವರ್ಗಾಯಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ADVERTISEMENT

ಜಿಬಿಎ ಮುಖ್ಯ ಆಯುಕ್ತರು ಬಿಎಸ್‌ಡಬ್ಲ್ಯುಎಂಎಲ್‌ಗೆ ನಗರ ಪಾಲಿಕೆಗಳಿಂದ ಸಕಾಲದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡುವುದು ಅತ್ಯವಶ್ಯ. ಆದ್ದರಿಂದ, ಆಸ್ತಿ ತೆರಿಗೆಯಲ್ಲಿ ತ್ಯಾಜ್ಯ ಉತ್ಪಾದಕರಿಂದ ಸಂಗ್ರಹಿಸುವ ಬಳಕೆದಾರ ಶುಲ್ಕ ಹಾಗೂ ಉಪಕರಗಳನ್ನು ವರ್ಗಾಯಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ, ಜ.20ರಂದು ಆದೇಶ ಹೊರಡಿಸಲಾಗಿದ್ದು, ಐದು ನಗರ ಪಾಲಿಕೆಗಳು ಕೂಡಲೇ ₹88.68 ಕೋಟಿಯನ್ನು ಬಿಎಸ್‌ಡಬ್ಲ್ಯುಎಂಎಲ್‌ ವರ್ಗಾಯಿಸುವಂತೆ ಸೂಚಿಸಲಾಗಿದೆ.

ಬಿಎಸ್‌ಡಬ್ಲ್ಯುಎಂಎಲ್‌ ವತಿಯಿಂದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸದ ಸಂಗ್ರಹ ಸಾಗಣೆ, ಸಂಸ್ಕರಣೆ, ಕಸದ ಭೂಭರ್ತಿ ಘಟಕ ನಿರ್ವಹಣೆ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಸುಪ್ರೀಂ ಕೋರ್ಟ್‌, ಹೈಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಲಕಾಲಕ್ಕೆ ಹೊರಡಿಸಿರುವ ನಿರ್ದೇಶನಗಳನ್ನು ಪಾಲಿಸಬೇಕು. ಘನತ್ಯಾಜ್ಯ ನಿರ್ವಹಣಾ ನಿಯಮಗಳು–2016 ಅನ್ನು ಪಾಲಿಸುವುದು ಐದು ನಗರ ಪಾಲಿಕೆಗಳು, ಬಿಎಸ್‌ಡಬ್ಲ್ಯುಎಂಎಲ್‌ ಜವಾಬ್ದಾರಿಯಾಗಿದೆ. ಬಿಎಸ್‌ಡಬ್ಲ್ಯುಎಂಎಲ್‌ ಪ್ರಸ್ತುತ ಚಾಲ್ತಿಯಲ್ಲಿರುವ ಗುತ್ತಿಗೆ, ಅಭಿವೃದ್ಧಿ/ ನಿರ್ವಹಣಾ ಕಾಮಗಾರಿಗಳು ಹಾಗೂ ಮುಂಬರುವ ಆರ್ಥಿಕ ವರ್ಷದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ತೊಂದರೆಯಾಗದಂತೆ ಅಗತ್ಯ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು ಎಂದು ಜಿಬಿಎ ಆಯುಕ್ತರು ಪ್ರಸ್ತಾವದಲ್ಲಿ ತಿಳಿಸಿದ್ದರು.

ಇಷ್ಟೆಲ್ಲ ಪ್ರಸ್ತಾವ ಸಲ್ಲಿಸದ ನಂತರ, ಕೂಡಲೇ ಹಣ ಪಾವತಿಸಲು ಐದು ನಗರ ಪಾಲಿಕೆಗಳಿಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದರೂ, ಬಿಎಸ್‌ಡಬ್ಲ್ಯುಎಂಎಲ್‌ಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೀಸಲಿರಿಸಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದರಿಂದ ಸಂಸ್ಕರಣೆ ಘಟಕ ಸೇರಿದಂತೆ ಒಣತ್ಯಾಜ್ಯ ಸಂಗ್ರಹ ಘಟಕಗಳ ಸ್ಥಾಪನೆಗೆ ತೊಂದರೆಯಾಗಲಿದೆ ಎನ್ನಲಾಗಿದೆ.

ಆಗಸ್ಟ್‌ನಿಂದ ಬಿಲ್‌ ಪಾವತಿಸಿಲ್ಲ

ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ 2025ರ ಆಗಸ್ಟ್‌ನಿಂದ ಬಿಎಸ್‌ಡಬ್ಲ್ಯುಎಂಎಲ್‌ ಬಿಲ್‌ ಪಾವತಿ ಮಾಡಿಲ್ಲ. ಘನತ್ಯಾಜ್ಯ ಸಂಗ್ರಹ ಸಾಗಣೆ ವಿಲೇವಾರಿಗೆ ಸಂಬಂಧಿಸಿದಂತೆ 2025ರ ಜನವರಿಯಿಂದ ಜುಲೈವರೆಗಿನ ವೆಚ್ಚವನ್ನು ಬಿಬಿಎಂಪಿ ಭರಿಸಿದೆ. ಆಗಸ್ಟ್‌ನಿಂದ ನವೆಂಬರ್‌ 2025ರವರೆಗೆ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಣೆ ಬಿಲ್ಲುಗಳ ಪಾವತಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಬಿಎಸ್‌ಡಬ್ಲ್ಯುಎಂಎಲ್‌ ಐದು ನಗರ ಪಾಲಿಕೆಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಪಾಲಿಕೆಗಳ ವತಿಯಿಂದ ಅನುದಾನ ಬಿಡುಗಡೆ ಆಗಿಲ್ಲ ಎಂದು ನಗರಾಭಿವೃದ್ಧಿಗೆ ಇಲಾಖೆಗೆ ಜಿಬಿಎ ಮುಖ್ಯ ಆಯುಕ್ತರು ಸಲ್ಲಿಸಿರುವ ಪ್ರಸ್ತಾವದಲ್ಲೇ ನಮೂದಾಗಿದೆ.

ಅನುದಾನ ಕಡಿತವಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ನಗರಾಭಿವೃದ್ಧಿ ಇಲಾಖೆ ಆದೇಶವನ್ನು ಪರಿಶೀಲಿಸುತ್ತೇನೆ.
-ಕರೀಗೌಡ, ಸಿಇಒ ಬಿಎಸ್‌ಡಬ್ಲ್ಯುಎಂಎಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.