
ಬೆಂಗಳೂರು: ಮ್ಯಾನ್‌ಹೋಲ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವ ಎಲ್ಲ ಖಾಸಗಿ ಏಜೆನ್ಸಿಗಳು ಜಲಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ 1964ರ ಸೆಕ್ಷನ್ 84 ಮತ್ತು 88ರ ಅಡಿಯ ಅಧಿಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಖಾಸಗಿ ಏಜೆನ್ಸಿಗಳ ಮೇಲೆ ನಿಗಾವಹಿಸಬೇಕು ಎಂದು ಎಂಜಿನಿಯರ್‌ಗಳಿಗೆ ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ಸೂಚನೆ ನೀಡಿದ್ದಾರೆ.
ಮಾ.7ರ ಒಳಗೆ ಕಡ್ಡಾಯ ನೋಂದಣಿ: ಒಳಚರಂಡಿ ವ್ಯವಸ್ಥೆಯ ಮ್ಯಾನ್‌ಹೋಲ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು(ಎಸ್‌ಟಿಪಿ) ಸ್ವಚ್ಛಗೊಳಿಸುವ ಖಾಸಗಿ ವಾಹನಗಳ ಮಾಲೀಕರು ಮತ್ತು ಏಜೆನ್ಸಿಗಳು ಮಾರ್ಚ್ 7ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು.
ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಚಯಗಳು, ಗುಂಪು ಮನೆಗಳು ಮತ್ತು ಖಾಸಗಿ ಬಡಾವಣೆಗಳ ಎಸ್‌ಟಿಪಿ ಹಾಗೂ ಮ್ಯಾನ್‌ಹೋಲ್‌ಗಳ ನಿರ್ವಹಣೆಯನ್ನು ಜಲಮಂಡಳಿಯಲ್ಲಿ ನೋಂದಾಯಿತವಾಗಿರುವ ಏಜೆನ್ಸಿಗಳ ಮುಖಾಂತರವೇ ಮಾಡಿಸಬೇಕು ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಸೂಚಿಸಲಾಗಿದೆ.
ನೋಂದಾಯಿಸಲಾಗದ ಏಜೆನ್ಸಿ ಅಥವಾ ಅನಧಿಕೃತ ವ್ಯಕ್ತಿಗಳ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡಾಗ ಯಾವುದಾದರೂ ಅನಾಹುತ ಸಂಭವಿಸಿದಲ್ಲಿ, ಆಯಾ ವಾಣಿಜ್ಯ ಕಟ್ಟಡ, ವಸತಿ ಸಮುಚ್ಚಯ, ಖಾಸಗಿ ಬಡಾವಣೆಗಳ ಮಾಲೀಕರು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರೇ ನೇರ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಲಾಗಿದೆ.
ಈ ನಿಯಮಾವಳಿಗಳ ಕುರಿತು ಎಲ್ಲ ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಸಮುಚ್ಚಯಗಳ ಮಾಲೀಕರು ಹಾಗೂ ಅಸೋಸಿಯೇಷನ್‌ಗಳಿಗೆ ಕೂಡಲೇ ಸೂಚನಾ ಪತ್ರವನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.