ಕೆ.ಆರ್.ಪುರ: ಬೈಯಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 27ರ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವುಗೊಳಿಸಿ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಪ್ರಜಾ ವಿಮೋಚನಾ ಚಳವಳಿಯ ಕಾರ್ಯಕರ್ತರು ಬೈಯಪ್ಪನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
1975ರಲ್ಲಿ ಮೂವತ್ತಕ್ಕೂ ಹೆಚ್ಚು ಜನರಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರವನ್ನು ನೀಡಲಾಗಿತ್ತು. ಕೆಲ ಅಧಿಕಾರಿಗಳು ನಿವೇಶನಕ್ಕೆ ಖಾತಾ ಮಾಡಿಕೊಡುವುದಾಗಿ ಹಕ್ಕುಪತ್ರವನ್ನು ತೆಗೆದುಕೊಂಡು ನಿವೇಶನವನ್ನೂ ನೀಡದೆ, ಹಕ್ಕುಪತ್ರವನ್ನೂ ಹಿಂದಿರುಗಿಸದೆ ಬಡವರಿಗೆ ಅನ್ಯಾಯ ಮಾಡಿದ್ದಾರೆ. ಈಗ ಕೆಲವು ಭೂಗಳ್ಳರು ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡು ಈ ಜಮೀನನ್ನು ತಮ್ಮದಾಗಿಸಿಕೊಂಡು ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ದೂರಿದರು.
‘ಬೈಯಪ್ಪನಹಳ್ಳಿ ಗ್ರಾಮದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಬಡ ಜನರೇ ಹೆಚ್ಚಾಗಿದ್ದು, ಇವರೆಲ್ಲ ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದಾರೆ. ಈ ಸಂಬಂಧ ಪ್ರಜಾ ವಿಮೋಚನಾ ಚಳವಳಿಯಿಂದ ಹಲವಾರು ಬಾರಿ ಕೆ.ಆರ್.ಪುರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ, ದಾಖಲೆಗಳನ್ನು ತಹಶೀಲ್ದಾರ್ ಅವರಿಗೆ ನೀಡಿದ್ದೇವೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಸರ್ಕಾರ ಸರ್ವೆ ನಂಬರ್ 27ರಲ್ಲಾಗಿರುವ ಜಮೀನು ಒತ್ತುವರಿ ತೆರವು ಮಾಡಿ, ಬಡಾವಣೆ ನಿರ್ಮಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು’ ಎಂದರು.
ಪ್ರತಿಭಟನೆಯಲ್ಲಿ ಚಳವಳಿಯ ಪದಾಧಿಕಾರಿಗಳಾದ ವೆಂಕಟರಮಣಪ್ಪ, ಮುನಿಸ್ವಾಮಿ, ಆಂಜಿನಪ್ಪ, ವೆಂಕಟಾಚಲಪತಿ, ಮಂಜುನಾಥ, ಕವಿತಾ, ಮಂಜಮ್ಮ, ಗೀತಾ, ಹೇಮಾವತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.