ADVERTISEMENT

ಬುರ್ಖಾ ಧರಿಸಿ, ಬಿಂದಿ ಹಚ್ಚಿ ಪ್ರತಿಭಟನೆ

ಸಿಎಎ, ಎನ್‌ಸಿಆರ್ ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 20:00 IST
Last Updated 5 ಜನವರಿ 2020, 20:00 IST
ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರ ಹಣೆಗೆ ಬಿಂದಿ ಹಚ್ಚಿದ ಹೋರಾಟಗಾರ್ತಿ
ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರ ಹಣೆಗೆ ಬಿಂದಿ ಹಚ್ಚಿದ ಹೋರಾಟಗಾರ್ತಿ   

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್‌) ನಿಯಮದ ವಿರುದ್ಧ ನಗರದ ಹಲವೆಡೆ ಭಾನುವಾರವೂ ಬೃಹತ್ ಪ್ರತಿಭಟನೆಗಳು ನಡೆದವು.

ಪುರಭವನ ಎದುರು ಸೇರಿದ್ದ ನೂರಾರು ಮಂದಿ, ‘ಬುರ್ಖಾ ಮತ್ತು ಬಿಂದಿ’ ಹೆಸರಿನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬುರ್ಖಾ ಧರಿಸಿ ಹಣೆಗೆ ಬಿಂದಿ ಹಚ್ಚಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ‘ನನ್ನ ಬಟ್ಟೆ ಹಾಗೂ ಬಿಂದಿ ನೋಡಿ. ಗೊತ್ತಾಯ್ತಾ ನಾನು ಯಾರು ಎಂದು? ಹಿಂದೂನಾ ಅಥವಾ ಮುಸ್ಲಿಮಾ’ ಎಂದು ಪ್ರಶ್ನಿಸುವ ಫಲಕಗಳನ್ನು ಪ್ರದರ್ಶಿಸಿದರು.

ADVERTISEMENT

‘ಸರ್ವರೂ ಸಮಾನರು. ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ದೇಶದಲ್ಲಿ ಪ್ರಜೆಗಳೆಲ್ಲರೂ ಬದುಕುತ್ತಿದ್ದಾರೆ. ಇಂಥ ಜನರನ್ನು ಒಡೆಯಲು ಕೇಂದ್ರ ಸರ್ಕಾರ ಈ ಕಾಯ್ದೆ ರೂಪಿಸಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಧರ್ಮದ ಆಧಾರದಲ್ಲಿ ದೇಶ ಒಡೆಯಲು ಬಿಡುವುದಿಲ್ಲ. ಬಟ್ಟೆ ಹಾಗೂ ವೇಷಭೂಷಣ ನೋಡಿ ಮನುಷ್ಯನ ಧರ್ಮವನ್ನು ಅಳೆಯಲು ಆಗುವುದಿಲ್ಲ. ಇಂದು ಪ್ರತಿಭಟನೆಯಲ್ಲಿ ಬಹುತೇಕ ಮಹಿಳೆಯರು ಬುರ್ಖಾ ಧರಿಸಿದ್ದಾರೆ. ಹಣೆಗೆ ಕುಂಕುಮದ ಬಿಂದಿ ಹಚ್ಚಿಕೊಂಡಿದ್ದಾರೆ. ಇದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.

ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಮಗುವಿನ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಯ್ದೆಯನ್ನು ಖಂಡಿಸಿದರು. ನಗರದ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.