ADVERTISEMENT

ಕಸ ನಿರ್ವಹಣೆ | 33 ಪ್ಯಾಕೇಜ್‌ಗಳ ಟೆಂಡರ್‌: ಸಂಪುಟ ಸಭೆಯಲ್ಲಿ ತೀರ್ಮಾನ

7 ವರ್ಷದ ಅವಧಿಗೆ ₹4,791.95 ಕೋಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 21:54 IST
Last Updated 22 ಮೇ 2025, 21:54 IST
<div class="paragraphs"><p>ಕಸ ನಿರ್ವಹಣೆ–ಸಾಂದರ್ಭಿಕ ಚಿತ್ರ</p></div>

ಕಸ ನಿರ್ವಹಣೆ–ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ರಸ್ತೆ ಸ್ವಚ್ಛತೆಯ ಮೂಲಕ ತ್ಯಾಜ್ಯ ಸಂಗ್ರಹಣೆಯ ಪ್ರಾಥಮಿಕ ಸಾಗಣೆ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಮರು ಟೆಂಡರ್‌ ಆಹ್ವಾನಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು 7 ವರ್ಷದ ಅವಧಿಗೆ ₹4,791.95 ಕೋಟಿ ಮೊತ್ತದ 33 ಪ್ಯಾಕೇಜುಗಳನ್ನು ವಿಂಗಡಿಸಿ ಟೆಂಡರ್‌ ಪ್ರಕ್ರಿಯೆ ನಡೆಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ADVERTISEMENT

ಮೊದಲನೇ ವರ್ಷದ ವಾರ್ಷಿಕ ನಿರ್ವಹಣಾ ಅಂದಾಜು ವೆಚ್ಚ ₹588.54 ಕೋಟಿ ಆಗಿದ್ದು, ಆ ವೆಚ್ಚವನ್ನು ಬಿಬಿಎಂಪಿ ತನ್ನ ಅನುದಾನದಲ್ಲಿ ಭರಿಸಲಿದೆ. ಒಟ್ಟಾರೆ ₹4,791.95 ಕೋಟಿಗಳನ್ನು ಆಯಾ ವರ್ಷಗಳ ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಯ ನಿಧಿಯಿಂದ ಭರಿಸಲು ಅನುಮೋದನೆ ನೀಡಲಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಈ ಹಿಂದೆ ಬಿಜೆಪಿ ಅವಧಿಯಲ್ಲಿ ಕಸ ವಿಲೇವಾರಿಗೆ 98 ಪ್ಯಾಕೇಜ್‌ಗಳ ಟೆಂಡರ್‌ ಕರೆಯಲಾಗಿತ್ತು. ಈ ವಿಚಾರವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಈ ಟೆಂಡರ್‌ ಪ್ರಕ್ರಿಯೆ ಕುರಿತು ಅಂತಿಮ ತೀರ್ಮಾನ ಮಾಡುವಂತೆ ತೀರ್ಪು ನೀಡಿದೆ. ನಾವು ಪ್ರತಿ ಕ್ಷೇತ್ರದಲ್ಲೂ ಒಂದೊಂದು ಪ್ಯಾಕೇಜ್‌ ಮಾಡಲು ಮುಂದಾಗಿದ್ದೇವೆ. ದೊಡ್ಡ ಕ್ಷೇತ್ರಗಳಲ್ಲಿ ಎರಡು ಪ್ಯಾಕೇಜ್‌ ಸೇರಿ 33 ಪ್ಯಾಕೇಜ್‌ ಮೂಲಕ ಕಸ ವಿಲೇವಾರಿ ಮಾಡಲಾಗುವುದು’ ಎಂದರು.

ಬಂಡೇಮಠದಲ್ಲಿ ವಸತಿ ಸಮುಚ್ಛಯ: ಬೆಂಗಳೂರು ನಗರದ ಕೆಂಗೇರಿ ಬಂಡೇಮಠ ಬಡಾವಣೆಯಲ್ಲಿ  ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು. 6 ಎಕರೆ 8 ಗುಂಟೆ ಜಮೀನಿನಲ್ಲಿ ಕ್ಲಬ್‌
ಹೌಸ್‌, ಈಜುಕೊಳ, ಜಿಮ್‌, ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣಗಳನ್ನು ಒಳಗೊಂಡ 2 ಬಿಎಚ್‌ಕೆಯ 214 ಫ್ಲ್ಯಾಟ್‌ಗಳನ್ನು, 3 ಬಿಎಚ್‌ಕೆಯ 214 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುವುದು. ವಸತಿ ಸಮುಚ್ಛಯ ₹180 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಪಾಟೀಲ ತಿಳಿಸಿದರು.

ಗುತ್ತಿಗೆ ಮೌಲ್ಯ ಪಾವತಿಸಿದರೆ ಬಡ್ಡಿ ಮನ್ನಾ: ಬಿಡಿಎಯಿಂದ ಸಾರ್ವಜನಿಕ ಸೌಲಭ್ಯದ (ಸಿಎ) ನಿವೇಶನ  ಪಡೆದು ಗುತ್ತಿಗೆ ಮೌಲ್ಯದ ಪಾವತಿ ಬಾಕಿ ಇರಿಸಿಕೊಂಡಿರುವ ವಿವಿಧ ಸಂಸ್ಥೆಗಳು 120 ದಿನಗಳೊಳಗೆ ಸಂಪೂರ್ಣ ಗುತ್ತಿಗೆ ಮೌಲ್ಯ ಪಾವತಿಸಿದರೆ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಒಂದು ಬಾರಿಯ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು ₹234 ಕೋಟಿ ಬಾಕಿ ಇದೆ ಎಂದು ಅವರು ಹೇಳಿದರು.

ಮುಂದೂಡಿಕೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಇನ್ನೂ ಮೂರರಿಂದ ನಾಲ್ಕು ಮಂದಿ ಸಚಿವರು ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿಯವರಿಗೆ ಲಿಖಿತವಾಗಿ ಕೊಡಬೇಕು. ಹೀಗಾಗಿ ಈ ವಿಷಯವನ್ನು ಮುಂದೂಡಲಾಗಿದೆ ಎಂದು ಪಾಟೀಲ ತಿಳಿಸಿದರು.

18 ಶಾಸಕರ ಅಮಾನತು 25ರಂದು ಸಭೆ
ವಿಧಾನಸಭೆಯ ಕಲಾಪದ ವೇಳೆ ಗದ್ದಲ ಎಬ್ಬಿಸಿದ ಬಿಜೆಪಿಯ 18 ಶಾಸಕರ ಅಮಾನತು ರದ್ದುಗೊಳಿಸುವ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಲು ಇದೇ 25ರಂದು ಸಭಾಧ್ಯಕ್ಷರು ಸಭೆ ಕರೆದಿದ್ದಾರೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಈ ವಿಷಯ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಸಭಾಧ್ಯಕ್ಷರು ಕರೆಯುವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮತ್ತು ಇತರರು ಭಾಗವಹಿಸುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.