ಎಐ ಸಾಂದರ್ಭಿಕ ಚಿತ್ರ
ರಾಯಿಟರ್ಸ್ ಚಿತ್ರ
ಬೆಂಗಳೂರು: ‘ನಮ್ಮ ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳ ಜತೆಗೆ ನಾವು ಮಾತನಾಡಬಹುದಾದ ಸಾಧ್ಯತೆಯನ್ನು ಎಐ ಸೃಷ್ಟಿಸಲಿದೆ’ ಎಂದು ‘ಗೂಗಲ್ ಎಕ್ಸ್’ ಸ್ಥಾಪಕ ಸೆಬಾಸ್ಟಿಯನ್ ಥ್ರನ್ ತಿಳಿಸಿದರು.
‘ಜಾಗತಿಕ ಹೂಡಿಕೆದಾರರ ಸಮಾವೇಶ’ದಲ್ಲಿ ಗುರುವಾರ ನಡೆದ ‘ಪ್ರವರ್ತಕ ಎಐ: ಅಮೋಘ ಕಲ್ಪನೆಯಿಂದ ನೈಜ ಪ್ರಭಾವದವರೆಗೆ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಐ ಪ್ರಗತಿಯು ಕಲ್ಪನೆಗೂ ಮೀರಿ ಬೆಳೆಯುತ್ತಿದೆ. ‘ಚಾಟ್ ಜಿಪಿಟಿ’ಯನ್ನು ಮೂರು ವರ್ಷಗಳ ಹಿಂದೆ ಯಾರೂ ಕಲ್ಪಿಸಿಕೊಂಡಿರಲಿಲ್ಲ. ಮುಂದಿನ ಮೂರು ವರ್ಷಗಳಲ್ಲಿ ಎಐ ಸ್ವರೂಪ ಹೇಗಿರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಸ್ವಯಂಚಾಲಿತ ಕಾರುಗಳು ಎಷ್ಟು ಸ್ವತಂತ್ರವಾಗಿವೆ ಎಂದರೆ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ‘ವೇಮೋ’ ಕಾರು ಯಾರ ಮೇಲ್ವಿಚಾರಣೆಯೂ ಇಲ್ಲದೆ ಜನರನ್ನು ಒಯ್ಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ ಎಂದು ಹೇಳಿದರು.
ಎಐ ತಂತ್ರಜ್ಞಾನವು ಮನುಷ್ಯ ಕುಲವನ್ನು ನಾಶ ಮಾಡಲಿದೆ ಎಂಬ ಭಯ ಜನರಲ್ಲಿತ್ತು. ಈಗ ಈ ಆತಂಕ ದೂರವಾಗಿದೆ. ಜನರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಎಐ ಮೊದಲು ಬರವಣಿಗೆಯಲ್ಲಿ ಮುಂದಿನ ಪದವನ್ನು ಊಹಿಸುತ್ತಿತ್ತು. ಆನಂತರ ವಾಕ್ಯ ಊಹಿಸುತ್ತಿತ್ತು. ಈಗ ಪುಟಗಟ್ಟಲೆ ಸ್ವತಂತ್ರವಾಗಿ ಬರೆಯಬಲ್ಲದು ಎಂದರು.
‘ದಿ ಎಕನಾಮಿಸ್ಟ್’ ನ ಗ್ರಾಫಿಕ್ ವಿವರ ವಿಭಾಗದ ಸಂಪಾದಕಿ ಮಿಚೆಲ್ ಹೆನ್ನೆಸ್ಸಿ ಗೋಷ್ಠಿ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.