ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಮಹಿಳೆಯರು ಮತ್ತು ಯುವಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವ ಶ್ವಾಸಕೋಶ ದಿನದ ಅಂಗವಾಗಿ ಇಲ್ಲಿನ ಸಂಪ್ರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರು ಈ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.
ಧೂಮಪಾನ ಮಾಡುವುದು, ಧೂಮಪಾನದಿಂದ ಹೊರ ಬಂದ ಹೊಗೆ ಪಕ್ಕದಲ್ಲಿ ಇರುವವರ ಶ್ವಾಸಕೋಶಕ್ಕೂ ಸೇರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಮೆಡಿಕಲ್ ಅಂಕಾಲಜಿಸ್ಟ್ ಮತ್ತು ಹೆಮಟಾಲಾಜಿನ್ಸ್ ಡಾ. ರಾಧೇಶ್ಯಾಂ ನಾಯಕ್ ಮಾತನಾಡಿ, ‘ಶೇ 60ಕ್ಕಿಂತಲೂ ಅಧಿಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಧೂಮಪಾನ ಮತ್ತು ತಂಬಾಕಿನ ಇತರ ಮಾದರಿಯ ಬಳಕೆಯಿಂದ ಬರುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಮಾಡುವುದು ಅಪಾಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದಲ್ಲದೇ ವಾಹನ ದಟ್ಟಣೆ ಮತ್ತು ಮನೆಯ ಅಡುಗೆ ಕೋಣೆಯಲ್ಲಿ ಬಳಸುವ ಉರುವಲು ಅಥವಾ ಇಂಧನಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯವೂ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ’ ಎಂದು ವಿವರಿಸಿದರು.
ಪ್ರಿವೆಂಟಿವ್ ಅಂಕಾಲಜಿಸ್ಟ್ ಡಾ. ವಿನೋದ್ ಕೆ.ರಮಣಿ ಮಾತನಾಡಿ, ‘ಬಹುತೇಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಮೂರು ಮತ್ತು ನಾಲ್ಕನೇ ಹಂತ ತಲುಪಿದಾಗ ಪತ್ತೆಯಾಗುತ್ತಿವೆ. ಅಷ್ಟು ಹೊತ್ತಿಗೆ ಕ್ಯಾನ್ಸರ್ ಗಂಭೀರ ಸ್ವರೂಪಕ್ಕೆ ತಿರುಗಿರುತ್ತದೆ. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭ. ಆದರೆ, ತಪಾಸಣೆಗೆ ಭಾರತೀಯರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ರೇಡಿಯೇಷನ್ ಅಂಕಾಲಜಿಸ್ಟ್ ಡಾ.ವರುಣ್ ಕುಮಾರ್ ಮಾತನಾಡಿ, ‘ಅನೇಕ ಶ್ವಾಸಕೋಶ ಕ್ಯಾನ್ಸರ್ ರೋಗಿಗಳು ಧೂಮಪಾನಿಗಳು ಮತ್ತು ಮದ್ಯಪಾನಿಗಳಾಗಿರುತ್ತಾರೆ. ಶ್ವಾಸಕೋಶ, ಯಕೃತ್ (ಲಿವರ್) ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಚಿಕಿತ್ಸೆಯ ಸಮಯದಲ್ಲೂ ಧೂಮಪಾನವನ್ನು ಮುಂದುವರಿಸುತ್ತಾರೆ’ ಎಂದು ವಿಷಾದಿಸಿದರು.
ಶ್ವಾಸಕೋಶದ ತಪಾಸಣೆಯನ್ನು ನಿಯಮಿತವಾಗಿ ಮಾಡಬೇಕು. ಧೂಮಪಾನ ತ್ಯಜಿಸಲು ಜಾಗೃತಿ ಅಭಿಯಾನಗಳಾಗಬೇಕು ಎಂದು ರೇಡಿಯೇಷನ್ ಅಂಕಾಲಜಿಸ್ಟ್ ಡಾ.ಅಜಯ್ ಜಿ.ವಿ. ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.