ADVERTISEMENT

ಕಾರಿನಲ್ಲಿ ಬಂದು ದ್ವಿಚಕ್ರ ವಾಹನ ಕಳವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 23:56 IST
Last Updated 14 ನವೆಂಬರ್ 2019, 23:56 IST
ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ನಂದಿನಿ ಲೇಔಟ್ ಠಾಣೆ ಪೊಲೀಸರು
ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ನಂದಿನಿ ಲೇಔಟ್ ಠಾಣೆ ಪೊಲೀಸರು   

ಬೆಂಗಳೂರು: ಕಾರಿನಲ್ಲಿ ಸುತ್ತಾಡಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲದ ಚಂದ್ರಕಾಂತ್ ಅಲಿಯಾಸ್ ಗುಂಡ (23), ಕೆಂಗೇರಿಯ ಮುನಿಸಂಜೀವ್ ಅಲಿಯಾಸ್ ರಾಜು (26) ಹಾಗೂ ನಂದಕುಮಾರ್ (25) ಬಂಧಿತರು. ಅವರಿಂದ ₹ 2.30 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

‘ಲಗ್ಗೆರೆಯ ಎಸ್‌.ಎಸ್‌.ಕಾಲೊನಿ ನಿವಾಸಿಮಂಜುನಾಥ್ ಎಂಬುವರು ತಮ್ಮ ಮನೆ ಎದುರು ಇದೇ 2ರಂದು ರಾತ್ರಿ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ನೋಡಿದಾಗ ವಾಹನ ಇರಲಿಲ್ಲ. ಯಾರೋ ಅಪರಿಚಿತರು ಕಳವು ಮಾಡಿರುವುದಾಗಿ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದರು.

ADVERTISEMENT

’ಆರೋಪಿ ಚಂದ್ರಕಾಂತ್‌ ಈ ಹಿಂದೆಯೂ ಬೈಕ್ ಕಳವು ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಜೈಲಿಗೆ ಹೋಗಿದ್ದ ಆತ ಜಾಮೀನು ಮೇಲೆ ಹೊರ ಬಂದಿದ್ದ. ಆತನಿಗೆ ಟ್ರಾವೆಲ್ಸ್‌ ಕಂಪನಿಯೊಂದರಲ್ಲಿ ಚಾಲಕನಾಗಿದ್ದ ನಂದಕುಮಾರ್‌ ಹಾಗೂ ರಾಜುವಿನ ಪರಿಚಯವಾಗಿತ್ತು.’

‘ನಂದಕುಮಾರ್‌ನ ಕಾರಿನಲ್ಲೇ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಮನೆ ಮುಂದೆ ನಿಲ್ಲಿಸುತ್ತಿದ್ದ ಹಾಗೂ ಪಾರ್ಕಿಂಗ್ ಜಾಗದಲ್ಲಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು. ಬ್ಯಾಟರಾಯನಪುರ, ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲೂ ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.