ADVERTISEMENT

ಸುತ್ತೋಲೆ ಉಲ್ಲಂಘನೆ: ಟೆಂಡರ್ ಮೊತ್ತ ಶೇ 21.59ರಷ್ಟು ಹೆಚ್ಚಳ!

ಶೇ 5ಕ್ಕಿಂತ ಹೆಚ್ಚಿದ್ದರೆ ಮರು ಟೆಂಡರ್ ನಡೆಸಬೇಕು ಎಂಬ ಸುತ್ತೋಲೆ ಉಲ್ಲಂಘನೆ

ವಿಜಯಕುಮಾರ್ ಎಸ್.ಕೆ.
Published 21 ಜೂನ್ 2022, 19:31 IST
Last Updated 21 ಜೂನ್ 2022, 19:31 IST
ಕಾರ್ಡ್ ರಸ್ತೆಯ ಬಸವೇಶ್ವರನಗರ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕಂಬಗಳನ್ನು ಅಳವಡಿಸಿರುವುದು –ಪ್ರಜಾವಾಣಿ ಚಿತ್ರ
ಕಾರ್ಡ್ ರಸ್ತೆಯ ಬಸವೇಶ್ವರನಗರ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕಂಬಗಳನ್ನು ಅಳವಡಿಸಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಟೆಂಡರ್ ಮೊತ್ತಕ್ಕಿಂತ ಶೇ 5ಕ್ಕಿಂತ ಹೆಚ್ಚಿನ ಮೊತ್ತವನ್ನು ಅಂಗೀಕರಿಸದಂತೆ ಆರ್ಥಿಕ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಒಂದೇ ತಿಂಗಳಲ್ಲಿ ಸರ್ಕಾರವೇ ಉಲ್ಲಂಘಿಸಿ, ಶೇ 21.59ರಷ್ಟು ಹೆಚ್ಚಿನ ಮೊತ್ತಕ್ಕೆ ಅನುಮೋದನೆ ನೀಡಿದೆ.

ಪಶ್ಚಿಮ ಕಾರ್ಡ್‌ ರಸ್ತೆಯ ಬಸವೇಶ್ವರನಗರ ಜಂಕ್ಷನ್‌ನಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬಿಬಿಎಂಪಿ ಟೆಂಡರ್ ಆಹ್ವಾನಿಸಿತ್ತು. 2018–19ರ ಎಸ್‌ಆರ್‌ ದರದಂತೆ ₹17.21 ಕೋಟಿ ಅಂದಾಜಿಸಿ ಟೆಂಡರ್ ಆಹ್ವಾನಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಬಿಡ್‌ ತೆರೆದಾಗ ಎರಡು ಸಂಸ್ಥೆಗಳು ಮಾತ್ರ ಅರ್ಹವಾಗಿದ್ದವು.

ಟೆಂಡರ್ ತೆರೆದಾಗ ಆರ್‌ಪಿಪಿ ಇನ್‌ಫ್ರಾ ಪ್ರಾಜೆಕ್ಟ್ ಲಿಮಿಟೆಡ್‌ ₹20.92 ಕೋಟಿ ಮತ್ತು ಎಂ.ವೆಂಕಟರಾವ್ ಇನ್‌ಫ್ರಾ ಪ್ರಾಜೆಕ್ಟ್ಸ್‌ ಕಂಪನಿ ₹20.97 ಕೋಟಿ ನಮೂದಿಸಿರುವುದು ಬಹಿರಂಗವಾಯಿತು. ಟೆಂಡರ್ ಪ್ರೀಮಿಯಂ ಮೊತ್ತಕ್ಕೆ ಹೋಲಿಸಿದರೆ ಬಿಡ್ಡುದಾರರು ಸಲ್ಲಿಸಿರುವ ಮೊತ್ತಗಳು ಕ್ರಮವಾಗಿ ಶೇ 21.59 ಮತ್ತು ಶೇ 21.85ರಷ್ಟು ಹೆಚ್ಚಿದೆ. ಈ ಎರಡು ಕಂಪನಿಗಳಲ್ಲಿ ಕಡಿಮೆ ಮೊತ್ತ ದಾಖಲಿಸಿದ್ದ ಆರ್‌ಪಿಪಿ ಇನ್‌ಫ್ರಾ ಪ್ರಾಜೆಕ್ಟ್ಸ್‌ ಕಂಪನಿಗೆ ಗುತ್ತಿಗೆ ವಹಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಆದೇಶವವೂ ಜೂನ್ 14ರಂದು ಹೊರಬಿದ್ದಿದೆ.

ADVERTISEMENT

ಮೇ 10ರಂದು ಆರ್ಥಿಕ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಟೆಂಡರ್ ಮೊತ್ತದಲ್ಲಿ ಶೇ 5ಕ್ಕಿಂತ ಜಾಸ್ತಿ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಇಲ್ಲ. ಒಂದು ವೇಳೆ ಅನಿವಾರ್ಯ ಸಂದರ್ಭವಾರೆ ಸಮರ್ಥನೀಯ ಕಾರಣಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆಯಬೇಕು ಎಂದು ತಿಳಿಸಿತ್ತು.

ಕಾರ್ಡ್‌ ರಸ್ತೆಯ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ನಡಾವಳಿಗಳನ್ನು ಗಮನಿಸಿದರೆ ಸಮಿತಿ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಮೇ 4ರಂದು ನಡೆದ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದ್ದು, ಹೆಚ್ಚುವರಿ ಮೊತ್ತ ನಿಗದಿ ಮಾಡುವ ವಿಷಯದಲ್ಲಿ ಒಮ್ಮತದ ನಿರ್ಣಯಕ್ಕೆ ಬಂದಿಲ್ಲ. ಆದರೆ, ಲೋಕೋಪಯೋಗಿ ಇಲಾಖೆಯ ಹೊಸ ಎಸ್‌ಆರ್‌ ದರಕ್ಕೆ ಹೋಲಿಸಿದರೆ ಶೇ 2ರಷ್ಟು ಮಾತ್ರ ಹೆಚ್ಚುವರಿ ಆಗಲಿದೆ ಎಂಬ ಅಭಿಪ್ರಾಯವನ್ನು ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಶೇ 21.59ರಷ್ಟು ಹೆಚ್ಚುವರಿ ಮೊತ್ತದ ಪ್ರಸ್ತಾವನೆ ತಿರಸ್ಕರಿಸಿ ಮರು ಟೆಂಡರ್ ಕರೆಯಬಹುದು ಅಥವಾ ಈ ವಿಷಯದಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವ ವಿಷಯವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲು ಸಮಿತಿ ತೀರ್ಮಾನಿಸಿತ್ತು. ಜೂ.10ರಂದು ಆದೇಶ ಹೊರಬಿದ್ದಿದ್ದು, ಅದರಲ್ಲಿ ಮುಖ್ಯಮಂತ್ರಿ ಅವರ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ ಶೇ 21.59ರಷ್ಟು ಹೆಚ್ಚುವರಿ ಮೊತ್ತಕ್ಕೆ ಟೆಂಡರ್ ಅಂತಿಮಗೊಳಿಸಲಾಗಿದೆ.

ಅರ್ಧದಷ್ಟು ಕಾಮಗಾರಿ ಪೂರ್ಣ

ಒಂದೆಡೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಮೇಲ್ಸೇತುವೆಯ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ. ಈ ರಸ್ತೆಯಲ್ಲಿ ಬೇರೆ ಮೇಲ್ಸೇತುವೆ ನಿರ್ಮಿಸಿದ್ದ ಕಂಪನಿಯೇ ಈ ಕಾಮಗಾರಿಯನ್ನೂ ನಿರ್ವಹಿಸಿದ್ದು, ಟೆಂಡರ್ ಮಾತ್ರ ಬೇರೆ ಕಂಪನಿಯ ಪಾಲಾಗಿದೆ.

ಐದು ಕಂಬಗಳನ್ನು ನಿರ್ಮಿಸಲಾಗಿದ್ದು, ಕಾಮಗಾರಿ ಈಗಲೂ ಮುಂದುವರಿದಿದೆ. ಕಾರ್ಯಾದೇಶ ಪಡೆಯದೆ ನಿರ್ವಹಿಸಿರುವ ಕಾಮಗಾರಿಗೆ ಬಿಬಿಎಂಪಿ ಬಿಲ್ ಪಾವತಿಸುವುದೇ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಅನುಮತಿಯೇ ಇಲ್ಲದೆ ನಿರ್ವಹಿಸಿರುವ ಕಾಮಗಾರಿಗೆ ಗುಣಮಟ್ಟಕ್ಕೆ ಯಾರ ಹೊಣೆ, ಈ ಕಂಪನಿ ಬಿಲ್‌ ಸಲ್ಲಿಸಿದರೆ ಪಾವತಿಸಲು ಬಿಬಿಎಂಪಿಗೆ ಸಾಧ್ಯವಿದೆಯೇ? ಗುತ್ತಿಗೆ ಬೇರೆಯವರ ಪಾಲಾಗಿದ್ದರೂ ಕಾಮಗಾರಿ ನಿರ್ವಹಿಸಲು ಧೈರ್ಯ ನೀಡುತ್ತಿರುವ ಶಕ್ತಿಗಳು ಯಾವುವು ಎಂಬ ಹತ್ತು ಹಲವು ಪ್ರಶ್ನೆಗಳು ಎದ್ದಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಮುಖ್ಯ ಎಂಜಿನಿಯರ್‌(ಯೋಜನೆ) ಎಂ.ಲೋಕೇಶ್ ಅವರನ್ನು ‘ಪ‍್ರಜಾವಾಣಿ’ ಸಂಪರ್ಕಿಸಲು ಪ್ರಯತ್ನಿಸಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.